ರಾಜಕೀಯ ಸುದ್ದಿ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲು ಮತ್ತೆ ಶಿವಸೇನೆ ಕಿರಿಕ್

Share It

ಮುಂಬೈ : ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ನಾಯಕ, ಮಾಜಿ ಸಚಿವ ಆದಿತ್ಯ ಠಾಕ್ರೆ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಮಹಾಮೇಳಾವಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (MES) ಸರ್ಕಾರ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರದ ಸಂಭ್ರಮಾಚರಣೆ ನಡೆಯುತ್ತಿದೆ. ನೆರೆಯ ಈ ಪ್ರದೇಶದಲ್ಲಿ, ಮರಾಠಿ ಭಾಷಿಕರ ಹಕ್ಕುಗಳು ಕಸಿದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಶಿವಸೇನೆ ಕಾರ್ಯಕರ್ತರ ಬಂಧನ: ಮಹಾಮೇಳಾವ್‌ ಬೆಂಬಲಿಸಿ ಬೆಳಗಾವಿಗೆ ಬರುತ್ತಿದ್ದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕೊಲ್ಲಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವಣೆ ಹಾಗೂ ಅವರ ಸಂಗಡಿಗರನ್ನು ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಬಂಧಿಸಿದರು.

ವಿಜಯ ದೇವಣೆ, ಮುಖಂಡರಾದ ಸಂಜಯ ಪೋವಾರ, ಸುನೀಲ ಶಿಂತ್ರೆ, ಸುನೀಲ ಮೋದಿ ಸೇರಿದಂತೆ 75ರಿಂದ 80 ಜನರು ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ಮುಂದಾದರು. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲೇ ಅವರನ್ನು ತಡೆಯಲಾಯಿತು. ಗಡಿ ವಿವಾದದ ಕುರಿತಾಗಿ ಘೋಷಣೆ ಕೂಗಿದ ಕಾರ್ಯಕರ್ತರು ಸುಮಾರು 20 ನಿಮಿಷ ಧರಣಿ ನಡೆಸಿದರು. ಮಹಾರಾಷ್ಟ್ರ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.

ರಾಜ್ಯಕ್ಕೆ ದೇವಣೆ ಮತ್ತು ಅವರ ಸಂಗಡಿಗರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದರು.


Share It

You cannot copy content of this page