ರಾಜಕೀಯ ಸುದ್ದಿ

ರಾಜ್ಯ ರಾಜಕಾರಣದಲ್ಲಿ ಶುರುವಾಯ್ತು “ದಲಿತ” ಅಸ್ತ್ರ ಪ್ರಯೋಗ

Share It

ದಲಿತ ಸಿಎಂ ಚರ್ಚೆಗೆ ವೇದಿಕೆಯಾಗುತ್ತಿದೆ ರಾಜಕೀಯ ಬೆಳವಣಿಗೆ
ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ ದಲಿತ ನಾಯಕರು

ಬೆಂಗಳೂರು: ಡಾ. ಜಿ ಪರಮೇಶ್ವರ್ ಆಯೋಜನೆ ಮಾಡಿದ್ದ ದಲಿತ ನಾಯಕ ಡಿನ್ನರ್ ಮೀಟ್ ಕ್ಯಾನ್ಸಲ್ ಆದ ಬೆನ್ನಲ್ಲೇ ದಲಿತ ಮುಖಂಡರು ಹೊಸ ವರಸೆ ಶುರು ಮಾಡಿದ್ದಾರೆ. ಇದು ರಆಜ್ಯ ರಾಜಕಾರಣದ ದಿಕ್ಕನ್ನು ಬದಲಾಯಿಸುವ ಸಾಧ್ಯತೆಗಳಿವೆ.

ದಲಿತ ಸಿಎಂ ಕೂಗು ಆಗಾಗ ಕೇಳಿಬರುತ್ತಿದ್ದರೂ, ದಲಿತ ನಾಯಕರು ಒಗ್ಗಟ್ಟಿನಿಂದ ಈ ಕೂಗಿಗೆ ಬಲವಾಗಿ ನಿಂತಿರಲಿಲ್ಲ. ಈ ಕಾರಣದಿಂದಲೇ ಅನೇಕ ಸಲ ದಲಿತ ಸಿಎಂ ಪಟ್ಟದ ಸಾಧ್ಯತೆ ತಪ್ಪಿ ಹೋಗಿತ್ತು. ಇದೀಗ ಸಿಕ್ಕಿರುವ ಮತ್ತೊಂದು ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ದಲಿತ ನಾಯಕರು ತೀರ್ಮಾನಿಸಿದ್ದಾರೆ.

ಪರಮೇಶ್ವರ್ ಅವರ ದಲಿತ ನಾಯಕರ ಡಿನ್ನರ್‌ಗೆ ಡಿ.ಕೆ.ಶಿವಕುಮಾರ್ ಅಡ್ಡಗಾಲು ಹಾಕಿದರು ಎಂಬ ಮಾತು ಕೇಳಿಬರುತ್ತಿದ್ದಂತೆ ಡಾ. ಜಿ. ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರು ಕಿಡಿಕಾರಿದ್ದಾರೆ. ದಲಿತ ನಾಯಕರು ಒಗ್ಗಟ್ಟಾಗುತ್ತಿದ್ದಂತೆ ಕೆಲವರಿಗೆ ಕಣ್ಣುರಿ ಶುರುವಾಗುತ್ತದೆ. ಇದಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ನಂತರ ದಲಿತ ಸಿಎಂ ಅವಕಾಶದ ಬಾಗಿಲು ತೆರೆದಿದೆ. ಇದನ್ನು ತಪ್ಪಿಸುವುದು ಡಿ.ಕೆ.ಶಿವಕುಮಾರ್ ಅವರ ಪ್ರಯತ್ನವಾಗಿದೆ. ಇದಕ್ಕೆ ಕೆಲವು ಲಿಂಗಾಯತ ನಾಯಕರು ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಲು ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಒಕ್ಕಲಿಗ ಸಮುದಾಯದ, ಲಿಂಗಾಯತ ಸಮುದಾಯದ ಅನೇಕ ನಾಯಕರು ಸಿಎಂಗಳಾಗಿದ್ದಾರೆ. ಆಗೆಲ್ಲ ದಲಿತ ನಾಯಕರು ಅವರಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ದಲಿತ ಸಮುದಾಯ ಸದಾಕಾಲ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ಇಷ್ಟೆಲ್ಲ ಆದರೂ, ದಲಿತ ನಾಯಕರ ಒಗ್ಗಟ್ಟು, ದಲಿತರಿಗೆ ಅಧಿಕಾರ ಕೊಡುವುದು ಎಂದರೆ ಕಣ್ಣುರಿ ಏಕೆ ಎಂಬುದು ದಲಿತ ಮುಖಂಡರ ಆಕ್ರೋಶವಾಗಿದೆ.

ಈ ಹಿನ್ನೆಲೆಯಲ್ಲಿ ದಲಿತ ನಾಯಕರೆಲ್ಲ ಒಂದಾಗಿ ಡಾ. ಜಿ. ಪರಮೇಶ್ವರ್‌ಗೆ ಪಟ್ಟ ಕಟ್ಟಲು ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಪ್ರಯತ್ನಕ್ಕೆ ಸಿಎಂ ಸಿದ್ದರಾಮಯ್ಯ ಅವರ ಬೆಂಬಲವೂ ಇದ್ದು, ದಲಿತ ಸಿಎಂ ಮಾಡಿ, ದಲಿತರ ಪರ ಎಂದು ಸಾಭೀತು ಮಾಡಿಕೊಳ್ಳಲು ಇದೊಂದು ಅವಕಾಶ ಎಂದು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

ಇದು ಕಾಂಗ್ರೆಸ್‌ನಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು, ಡಿ.ಕೆ.ಶಿವಕುಮಾರ್ ಬಣ ಮುಂದೆ ಯಾವ ನಡೆಯನ್ನು ಅನುಸರಿಸಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.


Share It

You cannot copy content of this page