ಪರಶುರಾಮನ ನಕಲಿ ಮೂರ್ತಿ ನಿರ್ಮಾಣ: ಶಿಲ್ಪಿ ಕೃಷ್ಣ ನಾಯಕ್​ನ ಬಂಧನ

GridArt_20241111_124134947
Share It

ಉಡುಪಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿನ ಮೂರ್ತಿ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್​ನನ್ನು (45) ಕಾರ್ಕಳ ಪೊಲೀಸರು ಪುದುಚೇರಿಯ ಮಾಹೆಯಲ್ಲಿ ಬಂಧಿಸಿದ್ದಾರೆ.

ಶಿಲ್ಪಿ ಕೃಷ್ಣ ನಾಯಕ್ ನಕಲಿ ಮೂರ್ತಿ ನಿರ್ಮಿಸಿದ್ದಾರೆಂದು ನಲ್ಲೂರಿನ ಕೃಷ್ಣ ಶೆಟ್ಟಿ ಎಂಬುವುರು ದೂರು ನೀಡಿದ ಹಿನ್ನೆಲೆಯಲ್ಲಿ ಶಿಲ್ಪಿ ಕೃಷ್ಣ ನಾಯಕ್​ ಅವರನ್ನು​ ಬಂಧಿಸಿದ್ದಾರೆ. ಕೃಷ್ಣ ನಾಯಕ್ ಉಡುಪಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಉಡುಪಿ ನ್ಯಾಯಾಲಯ ಕೃಷ್ಣ ನಾಯಕ್ ಅವರ ಜಾಮೀನು ತಿರಸ್ಕರಿಸಿತ್ತು.

ಜಾಮೀನು ತಿರಸ್ಕಾರ ಬೆನ್ನಲ್ಲೇ ಕೃಷ್ಣ ನಾಯಕ್ ತಲೆಮರೆಸಿಕೊಂಡಿದ್ದರು. ಇದೀಗ, ಕಾರ್ಕಳ ಠಾಣೆ ಪೊಲೀಸರು ಶಿಲ್ಪಿ ಕೃಷ್ಣ ನಾಯಕ್ ಅವರನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬಿಜೆಪಿ ಸರಕಾರದ ಅಧಿಕಾರದ ಅವಧಿಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕಾರ್ಕಳ ಶಾಸಕ‌ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಥೀಂ ಪಾರ್ಕ್ ನಿರ್ಮಿಸಲಾಗಿತ್ತು.

ಚುನಾವಣಾ ಪೂರ್ವದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಅವರು ಥೀಂ ಪಾರ್ಕ್ ಮತ್ತು ಪರಶುರಾಮನ‌ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದರು. ಬಳಿಕ, ಕೆಲ ದಿನಗಳ ಕಾಲ ಕಾಮಗಾರಿ ಬಾಕಿ ಇದೆ ಎನ್ನುವ ಕಾರಣಕ್ಕೆ ಥೀಂ ಪಾರ್ಕ್‌ಗೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು.

ಇದು ಜನರಿಗೆ ಅನುಮಾನ ಬರುವಂತೆ ಮಾಡಿತ್ತು. ಹೀಗಾಗಿ ತನಿಖೆ ನಡೆಸಿದಾಗ ಮೂರ್ತಿ ಅಸಲಿಯತ್ತು ಹೊರಬಿದ್ದಿತ್ತು. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ಸ್ಥಾಪನೆ ಮಾಡಲಾಗಿದೆ ಎಂದು ಆರೋಪ ತಿಳಿದು ಬಂದಿತ್ತು.

ಇದಾದ ನಂತರ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿದ್ದ ಪರಶುರಾಮನ ಮೂರ್ತಿ ಏಕಾಏಕಿ ಕಾಣೆಯಾಗಿತ್ತು. ಈ ಕುರಿತು ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು.


Share It

You cannot copy content of this page