ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಪ್ರಭಾವಿ ರಾಜಕೀಯ ನಾಯಕರ ಹೆಸರು ಕೇಳಿಬರುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ರನ್ಯಾ ಹಿಂದೆ ಇರುವ ಆ ಪ್ರಭಾವಿ ರಾಜಕಾರಣಿ ಯಾರು? ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ಮಧ್ಯೆ ಈ ಪ್ರಕರಣದ ಸಿಐಡಿ ತನಿಖೆಗೆ ವಹಿಸಿದ್ದ ಆದೇಶವನ್ನು ರಾಜ್ಯಸರ್ಕಾರ ವಾಪಸ್ ಪಡೆದುಕೊಂಡಿದೆ.
ಪೊಲೀಸರಿಂದಲೇ ಪ್ರೋಟೊಕಾಲ್ ಉಲ್ಲಂಘನೆಯಾದ ಹಿನ್ನೆಲೆ ಸಿಐಡಿ ತನಿಖೆಗೆ ರಾಜ್ಯಸರ್ಕಾರ ಆದೇಶ ಹೊರಡಿಸಿತ್ತು. ಪ್ರೋಟೊಕಾಲ್ ಉಲ್ಲಂಘನೆಯಲ್ಲಿ ಕಾನ್ ಸ್ಟೇಬಲ್ ಗಳು ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ರಾಜ್ಯಸರ್ಕಾರ ಸಿಐಡಿಗೆ ಆದೇಶಿಸಿತ್ತು. ಆದ್ರೆ, ಇಂದು(ಮಾರ್ಚ್ 12) ಏಕಾಏಕಿ ರಾಜ್ಯಸರ್ಕಾರ, ಸಿಐಡಿ ಆದೇಶವನ್ನು ವಾಪಸ್ ಪಡೆದುಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ರನ್ಯಾ ರಾವ್ ವಿದೇಶಗಳಿಗೆ ಹೋಗಿ ಬರುವಾಗ ಪೊಲೀಸ್ ಸಿಬ್ಬಂದಿ ಲೋಪ ಇಲ್ಲಿ ಎದ್ದು ಕಾಣುತ್ತಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಆದ್ರೆ, ಮತ್ತೊಂದೆಡೆ ಎಸಿಎಸ್ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಆದೇಶವನ್ನು ವಾಪಸ್ ಪಡೆದಿರುವುದಾಗಿ ರಾಜ್ಯಸರ್ಕಾರ ಸ್ಪಷ್ಟನೆ ನೀಡಿದೆ.
ನಟಿ ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇದೆಯೇ? ಎಂಬ ಬಗ್ಗೆ ಒಂದು ವಾರದ ಒಳಗೆ ತನಿಖೆ ನಡೆಸಲು ಸೂಚಿಸಲಾಗಿದೆ.
ನಟಿ ರನ್ಯಾ ಚಿನ್ನ ಸಾಗಾಟ ಮಾಡುವಾಗ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸಿದ್ದರು. ಹೀಗಾಗಿ ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವಾದ ಸಂಗತಿಗಳು ಯಾವುವು? ಕೇಸ್ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ? ಎಂಬ ಬಗ್ಗೆ ತನಿಖೆ ನಡೆಸಲು ಅಧಿಕಾರಿ ನೇಮಿಸಲಾಗಿದೆ. ಇವರು ತಕ್ಷಣ ತನಿಖೆ ಪ್ರಾರಂಭಿಸಿ ಒಂದು ವಾರದಲ್ಲಿ ವರದಿ ಸಲ್ಲಿಸಬೇಕಿದೆ.