ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸಂಜೀವ್ ಖನ್ನಾ ನೇಮಕವಾಗಿದ್ದು, ಇದೀಗ ಅವರು ಪ್ರಮಾಣ ಸ್ವೀಕಾರ ಮಾಡಿದ್ದಾರೆ.
ನ್ಯಾ.ಡಿ.ವೈ ಚಂದ್ರಚೂಡ್ ನಿವೃತ್ತಿಯ ಕಾರಣದಿಂದ ಅವರ ಸ್ಥಾನಕ್ಕೆ ಸಂಜೀವ್ ಖನ್ನಾ ನೇಮಕವಾಗಿದ್ದಾರೆ. ಅವರ ಹೆಸರನ್ನು ಚಂದ್ರಚೂಡ್ ಅವರೇ ಶಿಫಾರಸು ಮಾಡಿದ್ದು, ಸಂಜೀವ್ ಖನ್ನಾ ಅವರ ಮುಂದಿನ ಅವಧಿ ಕುರಿತು ದೇಶದ ಜನತೆಗೆ ಅನೇಕ ನಿರೀಕ್ಷೆಗಳಿವೆ.
ಅಷ್ಟಕ್ಕೂ ಸಂಜೀವ್ ಖನ್ನಾ ಯಾರು ಎಂಬ ಬಗ್ಗೆ ದೇಶದಲ್ಲಿ ಚರ್ಚೆ ಆರಂಭವಾಗಿದೆ. ಅವರ ಹಿಂದಿನ ಮಹತ್ವದ ತೀರ್ಪುಗಳು, ನಡೆ ಮತ್ತು ವ್ಯಕ್ತಿತ್ವದ ಕುರಿತು ಚರ್ಚೆಗಳು ಆರಂಭವಾಗಿದ್ದು, ಅವರ ಈವರೆಗಿನ ನ್ಯಾಯ ಸೇವೆ ಕುರಿತು ಇಲ್ಲಿ ತಿಳಿಯಬಹುದು.
ನ್ಯಾ. ಸಂಜೀವ್ ಖನ್ನಾ ಆರ್ಟಿಕಲ್ 370 ರದ್ದುಗೊಳಿಸುವ ತೀರ್ಪಿನಿಂದ ದೇಶದ ಗಮನ ಸೆಳೆದಿದ್ದರು. ಇವರ ಅಧಿಕಾರದ ಅವಧಿ ಮೇ.13 ರ 2025 ರವರೆಗೆ ಮುಂದುವರಿಯಲಿದೆ.
ಖನ್ನಾ ಅವರು 2019 ರಿಂದ ಸುಪ್ರೀಂ ಕೋರ್ಟ್ ಮ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದು, EVM ಕುರಿತ ತೀರ್ಪು, ಎಲೆಕ್ಟ್ರೋಲ್ ಬಾಂಡ್ ರದ್ದು, ಆರ್ಟಿಕಲ್ 370 ರದ್ದು ಸೇರಿದಂತೆ ಅನೇಕ ಮಹತ್ವದ ತೀರ್ಪಿನ ಭಾಗವಾಗಿದ್ದರು. ತಿಹಾರ್ ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಅವರಿಗೆ ಬಹಳ ದಿನಗಳ ನಂತರ ಮಧ್ಯಂತರ ಜಾಮೀನು ನೀಡುವ ಮೂಲಕವೂ ಚರ್ಚೆಗೆ ಗ್ರಾಸವಾಗಿದ್ದರು.
ಸಂಜೀವ್ ಖನ್ನಾ ಅವರು, ಮೇ.14, 1960 ರಲ್ಲಿ ಜನಿಸಿದರು. ಅವರ ತಂದೆ ದೆಹಲಿ ಹೈಕೋರ್ಟ್ ನ ನಿವೃತ್ತ ನ್ಯಾಯಾದೀಶ ದೇವರಾಜ್ ಖನ್ನಾ. ಜತೆಗೆನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾದೀಶ ಎಚ್.ಆರ್. ಖನ್ನಾ ಅವರ ಸೋದರಳಿಯ ಆಗಿದ್ದಾರೆ. 2019 ರ ಜನವರಿ 18 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದರು.
2019 ಕ್ಕೆ ಮೊದಲು ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದು, ಅದಕ್ಕೆ ಮೊದಲು ಅನೇಕ ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು. 1983 ರಿಂದ ದೆಹಲಿ ಬಾರ್ ಕೌನ್ಸಿಲ್ ನ ಸದಸ್ಯರಾಗಿದ್ದಾರೆ. ಇದೀಗ ಮುಖ್ಯ ನ್ಯಾಯಮೂರ್ತಿ ಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.