ಸುದ್ದಿ

ಬುಧವಾರ ಮತ್ತೆ 53ನೇ CWNA ಸಭೆ: ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೇರಿ ಅಧಿಕಾರಿಗಳು ಭಾಗಿ

Share It

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಭೀಕರ ಬರಗಾಲ ಆವರಿಸಿರುವ ಬೆನ್ನಲ್ಲೇ ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದಿಂದ ನೀರು ಹರಿಸುವ ಕುರಿತು ಬುಧವಾರ ಮತ್ತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWNA) ಮಹತ್ವದ ಸಭೆ ನಡೆಯಲಿದೆ.

ನವದೆಹಲಿಯ ಎಂಟಿಎನ್‌ಎಲ್‌ ಕಟ್ಟಡದಲ್ಲಿ ಹೈಬ್ರಿಡ್‌ ಮಾದರಿಯ ಸಿಡಬ್ಲ್ಯೂಎನ್‌ಎ ಸಭೆಗೆ ಕರ್ನಾಟಕ, ತಮಿಳುನಾಡು ಮತ್ತು ಪಾಂಡಿಚೇರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಗೆ ಸಿಡಬ್ಲ್ಯೂ ಸದಸ್ಯ ವಿನೂತ್‌ ಗುಪ್ತ, ಡಾ.ನವೀನ್‌ಕುಮಾರ್‌, ಕೇಂದ್ರ ಜಲಶಕ್ತಿ ಜಂಟಿ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಅಗರವಾಲ್‌, ಕೃಷಿ ಇಲಾಖೆ ಪ್ರಾಂಕ್ಲಿನ್‌ ಎಲ್‌. ಕುಬುಂಗ್‌, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕೇರಳ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಬಿಶ್ವನಾಥ ಸಿನ್ಹ, ತಮಿಳುನಾಡು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸತ್ಯಬ್ರಾತಸಾಹು, ಪಾಂಡಿಚೇರಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಎ.ಮುತ್ತಮ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ಕರ್ನಾಟಕ ಸರ್ಕಾರ ಕಾವೇರಿ ಜಲಾನಯನ ತೀರಪ್ರದೇಶದ ಕೆಆರ್‌ಎಸ್‌‍, ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ಬಗ್ಗೆ ಮನವರಿಕೆ ಮಾಡಿಕೊಡಲಿದೆ. ಈ ಹಿಂದೆ ನಡೆದ ಸಭೆಯಲ್ಲಿ ಕರ್ನಾಟಕ ಸರ್ಕಾರ ಕಾವೇರಿ ವ್ಯಾಪ್ತಿಗೊಳಪಡುವ ಜಲಾಶಯಗಳಲ್ಲಿ ನೀರಿನ ಪ್ರಮಾಣ ಇತ್ತೀಚಿನ ದಶಕಗಳಲ್ಲೇ ಅತ್ಯಂತ ಕಡಿಮೆ ಎನ್ನುವ ಮಟ್ಟದಲ್ಲಿ ಸಂಗ್ರಹವಾಗಿದೆ. ವಾಡಿಕೆಯಂತೆ ಈ ಬಾರಿ ಮಳೆಯಾಗದ ಪರಿಣಾಮ ಜಲಾಶಯಗಳನ್ನು ನೀರಿನ ಸಂಗ್ರಹ ಕುಸಿದು ಡೆಡ್‌ ಸ್ಟೋರ್‌ ಹಂತಕ್ಕೆ ತಲುಪಿದೆ.

ನಮಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ರೈತರು ಕೃಷಿ ಚಟುವಟಿಕೆಗಳಿಗೆ ನಾಲೆಗೆ ನೀರು ಹರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದರೂ ಭವಿಷ್ಯದ ದೃಷ್ಟಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸುತ್ತಿದ್ದೇವೆ. ತಮಿಳುನಾಡು ರಾಜ್ಯ ಕೃಷಿ ಚಟುವಟಿಕೆಗಳಿಗೆ ಮಾತ್ರ ನೀರು ಹರಿಸಬೇಕೆಂದು ಒತ್ತಡ ಹಾಕುತ್ತಿದೆ. ಸಂಕಷ್ಟ ಸೂತ್ರವನ್ನು ಬರಗಾಲದ ಸಂದರ್ಭದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಅಣೆಕಟ್ಟುಗಳಲ್ಲಿ ನೀರು ಸಂಗ್ರಹವಾದರೆ ಮಾತ್ರ ನೀರು ಹರಿಸಲು ಸಾಧ್ಯ. ನಮಲ್ಲೇ ಕುಡಿಯುವ ನೀರು ಇಲ್ಲ ಎಂದರೆ ನೆರೆ ರಾಜ್ಯಕ್ಕೆ ನೀರು ಹರಿಸುವುದಾದರೂ ಹೇಗೆ ಎಂಬ ಮೂಲಭೂತ ಪ್ರಶ್ನೆಯನ್ನು ಕರ್ನಾಟಕ ಸರ್ಕಾರ ಸಭೆಯಲ್ಲಿ ಮುಂದಿಟ್ಟಿತ್ತು.

ಆದರೆ, ತಮಿಳುನಾಡು ಎಂದಿನಂತೆ ತನ್ನ ಹಠಮಾರಿ ಧೋರಣೆ ಅನುಸರಿಸಿ ಕಾವೇರಿ ಜಲಾಶಯಗಳಿಂದ ತಕ್ಷಣವೇ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮೊಂಡು ವಾದ ಮಾಡಿತ್ತು. ಅಂತಿಮವಾಗಿ ವಾದ-ಪ್ರತಿವಾದವನ್ನು ಆಲಿಸಿದ್ದ ಸಿಡಬ್ಲ್ಯೂಎನ್‌ಎ ಸಭೆಯು ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳು ಯತಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಸೂಚನೆ ನೀಡಿತ್ತು


Share It

You cannot copy content of this page