ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳಾದ ರನ್ಯಾ ರಾವ್ ದುಬೈನಿಂದ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಒಟ್ಟಾರೆ ದುಬೈನಿಂದ 14.2 ಕೆಜಿ ತೂಕದ ಬೆಲೆ ಬಾಳುವ ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ವಿಮಾನದಲ್ಲಿ ತಂದ ಆರೋಪ ರನ್ಯಾ ಮೇಲಿದೆ. ಈಗಾಗಲೇ ಚಿನ್ನ ಸಾಗಾಣೆ ಕೇಸ್ ನಲ್ಲಿ ರನ್ಯಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ದುಬೈನಿಂದ ಬೆಲೆ ಬಾಳುವ ಚಿನ್ನ ತರುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ ರನ್ಯಾ ಅವರೀಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಪ್ರೊಟೋಕಾಲ್ ಉಲ್ಲಂಘನೆ ಆಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ರಾಜ್ಯಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ 24 ಗಂಟೆಗಳಲ್ಲೇ ಸಿಐಡಿ ತನಿಖೆಯನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ರಾಜ್ಯ ಗೃಹಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ. ಈ ಮೂಲಕ ಹಬ್ಬಿದ ವಂದತಿಗಳಿಗೆ ತೆರೆ ಎಳೆದಿದ್ದಾರೆ.
ಮಾಧ್ಯಮಗಳ ಎದುರು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ‘ಪೊಲೀಸ್ ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ತಿಳಿದುಕೊಳ್ಳಲು ನಾನು ಸಿಐಡಿ ತನಿಖೆಗೆ ಆದೇಶಿಸಿದೆ. ಅಷ್ಟರೊಳಗಾಗಲೇ ಸಿಎಂ ಕಚೇರಿಯಿಂದ ಮೇಲ್ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ಒಂದೇ ವಿಚಾರಕ್ಕೆ ಎರಡು ಕಡೆ ತನಿಖೆ ಆಗೋದು ಬೇಡ ಎಂಬ ಕಾರಣಕ್ಕೆ ನಾವು ಸಿಐಡಿ ತನಿಖೆಯನ್ನು ಹಿಂಪಡೆದೆವು’ ಎಂದು ಹೇಳಿದ್ದಾರೆ.
ಈ ಪ್ರಕರಣದ ಹಿಂದೆ ಪ್ರಭಾವಿ ರಾಜಕಾರಣಿ ಇದ್ದಾರೆ ಎಂಬ ಮಾತುಗಳು ಕೇಳಿಬಂದವು. ಈ ಕಾರಣದಿಂದಲೇ ಸರ್ಕಾರದ ಮೇಲೆ ಒತ್ತಡ ಹೇರಲಾಯಿತು ಮತ್ತು ಸರ್ಕಾರ ಸಿಐಡಿ ತನಿಖೆ ಆದೇಶವನ್ನು ಹಿಂದಕ್ಕೆ ಪಡೆಯಿತು ಎನ್ನುವ ಮಾತು ಕೇಳಿಬಂದಿದ್ದವು. ಈ ಬಗ್ಗೆಯೂ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದಾರೆ. ‘ತನಿಖೆಗೆ ಆದೇಶ ನೀಡಲು ಯಾರೂ ಒತ್ತಡ ಹೇರಿರಲಿಲ್ಲ. ಹಿಂದಕ್ಕೆ ಪಡೆಯಲೂ ಯಾರೂ ಒತ್ತಡ ಹೇರಿಲ್ಲ. ಎರಡು ತನಿಖೆ ಬೇಡ ಎಂಬ ಕಾರಣಕ್ಕೆ ನಾವು ಹಿಂಪಡೆದಿದ್ದೇವೆ ಅಷ್ಟೇ. ಇಲ್ಲಿ ಯಾವುದೇ ಗೊಂದಲ ಬೇಡ’ ಎಂದು ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.
ಗೃಹ ಸಚಿವ ಪರಮೇಶ್ವರ್ ಅವರು ಈ ಮೊದಲು ರನ್ಯಾ ರಾವ್ ಮದುವೆಗೆ ಹೋಗಿದ್ದ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಸಚಿವ ಪರಮೇಶ್ವರ್, ‘ನಾವು ಸಾವಿರ ಮದುವೆಗೆ ಹೋಗ್ತಾ ಇರ್ತೀವಿ’ ಎಂದಷ್ಟೇ ಹೇಳಿದ್ದಾರೆ.
ನಟಿ ರನ್ಯಾ ಚಿನ್ನ ಸಾಗಾಟ ಮಾಡುವಾಗ ಮಲತಂದೆ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಹೆಸರು ಬಳಸಿದ್ದರು. ಹೀಗಾಗಿ ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವಾದ ಸಂಗತಿಗಳು ಯಾವುವು? ಕೇಸ್ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ? ಎಂಬ ಬಗ್ಗೆ ತನಿಖೆ ನಡೆಯಲಿದೆ.