ಬೆಂಗಳೂರು: ಮೇಕೆದಾಟು ಹೋರಾಟಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಕನ್ನಡ ಚಲನಚಿತ್ರ ಕಲಾವಿದರಿಗೆ ಡಿ.ಕೆ.ಶಿವಕುಮಾರ್ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಬಿಜೆಪಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮೇಕೆದಾಟು ಹೋರಾಟದಲ್ಲಿ ಭಾಗವಹಿಸುವುದು ಬಿಡುವುದು ಕಲಾವಿದರ ವಿವೇಚನೆಗೆ ಬಿಟ್ಟಿದ್ದು, ಆದರೆ, ಡಿಕೆಶಿ ಅವರು, ನಟ್ಟು-ಬೋಲ್ಟು ಟೈಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವುದು ಸರಿಯಲ್ಲ ಎಂದರು.
ಗೋಕಾಕ್ ಚಳುವಳಿಯ ನೇತೃತ್ವವನ್ನೇ ಚಲನಚಿತ್ರರಂಗ ವಹಿಸಿಕೊಂಡಿತ್ತು. ಡಾ. ರಾಜ್‌ಕುಮಾರ್ ಅದರ ನೇತೃತ್ವ ವಹಿಸಿಕೊಂಡು ಇಡೀ ರಾಜ್ಯದಲ್ಲಿ ಹೋರಾಟ ನಡೆಸಿದ್ದರು. ಈಗ ಹೋರಾಟದಲ್ಲಿ ಭಾಗವಹಿಸದಿದ್ದರೆ, ಜನರು ತೀರ್ಮಾನ ಮಾಡುತ್ತಾರೆ, ಆದರೆ, ಡಿಸಿಎಂ ಬೆದರಿಕೆ ಹಾಕುವುದು ತರವಲ್ಲ ಎಂದು ತಿಳಿಸಿದ್ದಾರೆ.