ಬೆಂಗಳೂರು: ಬಿಜೆಪಿಯ ಬಂಡಾಯ ಬಡಿದಾಟ ತಣಿಸಲು ಬಿ.ಎಸ್.ಯಡಿಯೂರಪ್ಪ ಎಂಟ್ರಿಯಾಗಿದ್ದು, ಬಂಡಾಯಗಾರರಿಗೆ ಟಾಂಗ್ ನೀಡಲು ಮಾಜಿಗಳು ಮತ್ತು ಪರಾಜಿತ ಅಭ್ಯರ್ಥಿಗಳ ಮನವೊಲಿಸಲು ಮುಂದಾಗಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಕೆಲ ಅತೃಪ್ತರು ವಿಜಯೇಂದ್ರ ಪಾಲಿಗೆ ಮುಳ್ಳಾಗಿದ್ದಾರೆ. ಇದನ್ನು ನಿಯಂತ್ರಣಕ್ಕೆ ತರಲು ವಿಜಯೇಂದ್ರಗಾಗಲೀ, ಸ್ವತಃ ಹೈಕಮಾಂಡ್ಗಾಗಲೀ ಸಾಧ್ಯವಾಗಲಿಲ್ಲ. ಹೀಗಾಗಿ, ಈವರೆಗೆ ಸೈಲೆಂಟ್ ಆಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಫೀಲ್ಡಿಗಿಳಿದಿದ್ದಾರೆ. ಅವರು, ಈ ಹಿಂದಿನ ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳು ಮತ್ತು ಮಾಜಿ ಶಾಸಕರನ್ನು ಸಭೆ ಕರೆದು ಅವರ ಜತೆ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ.
ಶುಕ್ರವಾರ ಸಂಜೆ ನಡೆಯುವ ಈ ಡಿನ್ನರ್ ಮೀಟ್ಗೆ ಕಳೆದೆರೆಡು ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು, ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನ ಮಾಡಲಾಗಿದೆ. ಈ ಸಭೆಯ ಮೂಲಕ ತಮ್ಮ ಪುತ್ರನ ಸಂಘಟನಾ ಬಲ ಹೆಚ್ಚಿಸುವುದು ಬಿಎಸ್ವೈ ತಂತ್ರಗಾರಿಕೆಯಾಗಿದೆ.
ಸಭೆಯ ಮೂಲಕ ಕೆಲವು ಬಂಡಾಯಗಾರರು ಬಿಟ್ಟರೆ ಮತ್ತೆಲ್ಲರೂ ವಿಜಯೇಂದ್ರ ಪರ ಇದ್ದಾರೆ ಎಂದು ಹೈಕಮಾಂಡ್ಗೆ ಸಂದೇಶ ನೀಡುವುದು ಒಂದು ಭಾಗವಾದರೆ, ಬಂಡಾಯ ಏಳುವವರಿಗೆ ತಮ್ಮ ಶಕ್ತಿಯೇನು ಎಂಬುದನ್ನು ಮನವರಿಕೆ ಮಾಡಿಕೊಡಲು ಇಂತಹದ್ದೊAದು ಡಿನ್ನರ್ ಪಾರ್ಟಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ, ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದ್ದು, ಕಾಂಗ್ರೆಸ್ನಲ್ಲಿಯೂ ಇಂತಹದ್ದೆ ಸಭೆಗಳು ನಡೆಯುತ್ತಿವೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ಆಯೋಜನೆಯಾಗಿದ್ದರೆ, ಬಂಡಾಯಗಾರರು ಸಭೆ ನಡೆಸಿದ್ದಾರೆ. ಹೀಗಾಗಿ, ರಾಜ್ಯ ರಾಜಕಾರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ ಎಂದರೆ ತಪ್ಪಲ್ಲ.