ಬಸವಕಲ್ಯಾಣ (ಬೀದರ್): ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 18 ವರ್ಷದ ಯುವತಿ ಸರ್ಕಾರಿ ಶಾಲೆಯ ಪಕ್ಕದ ಮುಳ್ಳಿನ ಪೊದೆಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾಳೆ.
ಇಂತಹ ಘೋರ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಯುವತಿಯ ಪೋಷಕರು ಕೆಲ ವರ್ಷಗಳಿಂದ ಗುಣತೀರ್ಥವಾಡಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮೂರು ದಿನಗಳ ಹಿಂದೆ ರಾತ್ರಿ ವೇಳೆ ಯುವತಿ ನಾಪತ್ತೆಯಾಗಿದ್ದಳು.ಇದೀಗ ಸರಕಾರಿ ಶಾಲೆಯ ಪಕ್ಕದ ಪೊದೆಯಲ್ಲಿ ಪತ್ತೆಯಾಗಿದ್ದು, ತಲೆ ಸೇರಿ ದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ಇದೆ.
ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಅಲಿಸಾಬ್, ಕೃಷ್ಣಕುಮಾರ್ ಪಾಟೀಲ್, ಶ್ರೀನಿವಾಸ ಅಲ್ಲಪೂರ, ಪಿಎಸ್ಐ ಅಂಬರೀಶ್ ವಾಗ್ಮೋಡೆ, ಸುವರ್ಣ ಮಲಶೆಟ್ಟಿ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಯುವತಿಯನ್ನು ಕೊಲೆ ಮಾಡಿ ಮುಳ್ಳು ಕಂಟಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.