ತಿಪಟೂರು: ಖಾಸಗಿ ಬಸ್ ಡಿಕ್ಕಿಯಾಗಿ ತಾಯಿ ಮತ್ತು ಮಗಳು ಮೃತಪಟ್ಟು ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ರಾಮಶೆಟ್ಟಿಹಟ್ಟಿ ಬಳಿಯ ರಾಷ್ಠಿಯ ಹೆದ್ದಾರಿಯ ಬೈಪಾಸ್ ಬಳಿ ಸೋಮವಾರ ನಡೆದಿದೆ.
ರಾಮಶೆಟ್ಟಿಹಳ್ಳಿಯ ಕಮಲಮ್ಮ (45), ಹಳೇಪಾಳ್ಯ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವೀಣಾ (13) ಮೃತರು. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಾಲು ಮಾಡಲಾಗಿದೆ.
ಸ್ಥಳದಲ್ಲಿ ಪ್ರತಿ ನಿತ್ಯ ಅಪಘಾತ ಸಂಭವಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಆಗ್ರಹಿಸಿದರು. ರಸ್ತೆ ದಾಟಲು ಅನುಕೂಲವಾಗುವಂತೆ ಸ್ಥಳದಲ್ಲಿ ಅಂಡರ್ಪಾಸ್ ನಿರ್ಮಿಸಲು ಎನ್ಎಚ್ಎಐ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಸ್ಥಳಕ್ಕೆ ತಹಶೀಲ್ದಾರ್ ಪವನಕುಮಾರ್, ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ತಿಪಟೂರು ಗ್ರಾಮಾಂತರ ಠಾಣಾ ಪೊಲೀಸರು ಖಾಸಗಿ ಬಸ್ ಚಾಲಕನನ್ನು ಬಂಧಿಸಿದ್ದಾರೆ.

