ಬೆಂಗಳೂರು: ಟೇಕಾಫ್ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಕಂಡು ಬಂದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಗುರುವಾರ ನಡೆಯಿತು.
ಗುರುವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳುತ್ತಿದ್ದ 6E-6423 ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಕಂಡು ಬಂದಿದೆ. ‘Dont go Bomb hi please’ ಅಂತ ಪೇಪರ್ನಲ್ಲಿ ಬರೆದು ವಿಮಾನದ ಕ್ರೀವ್ ಲ್ಯಾವೆಟರಿನಲ್ಲಿ ಇಟ್ಟಿರುವುದು ಪತ್ತೆಯಾಗಿದೆ.
ಬಾಂಬ್ ಬೆದರಿಕೆಯ ಸಂದೇಶ ಕಂಡು ಬಂದ ಹಿನ್ನೆಲೆ ತಕ್ಷಣವೇ ಪ್ರಯಾಣಿಕರನ್ನ ಕೆಳಗಡೆ ಇಳಿಸಿದ ಭದ್ರತಾ ಸಿಬ್ಬಂದಿ ವಿಮಾನವನ್ನ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಯಾವುದೇ ಬಾಂಬ್ ಪತ್ತೆಯಾಗ ಹಿನ್ನೆಲೆ ಇದೊಂದು ಹುಸಿ ಬಾಂಬ್ ಸಂದೇಶ ಎಂದು ದೃಢಪಟ್ಟಿದೆ.
ಬಾಂಬ್ ಬೆದರಿಕೆ ಪತ್ರ ಬರೆದಿಟ್ಟವನ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಇಂಡಿಗೋ ಸಂಸ್ಥೆಯಿಂದ ದೂರು ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವ ಮುನ್ನ ಬೆಂಗಳೂರು-ಅಹಮದಾಬಾದ್ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಸಂಬಂಧ ಇಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 16 ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಸಂಜೆ 7.35 ರ ಸುಮಾರಿಗೆ ಬಾಂಬ್ ಬೆದರಿಕೆಯ ಸಂದೇಶದ ಕೈಬರಹ ಪತ್ತೆಯಾಯಿತು. ನಂತರ, ಶೋಧ ಕಾರ್ಯಾಚರಣೆ ತಕ್ಷಣವೇ ಪ್ರಾರಂಭಿಸಿ, ವಿಮಾನದಲ್ಲಿ ಸಂಪೂರ್ಣವಾಗಿ ಭದ್ರತಾ ಪರಿಶೀಲನೆ ನಡೆಸಲಾಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕೆಐಎಎಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ವಿಮಾನಯಾನ ಸಂಸ್ಥೆ ದೂರು ದಾಖಲಿಸಿದೆ. ಬೆದರಿಕೆಯಿಂದ ತೀವ್ರ ಅಡಚಣೆ ಉಂಟಾಯಿತು. ಜೊತೆಗೆ ಪ್ರಯಾಣಿಕರು, ಸಿಬ್ಬಂದಿ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ವಿಮಾನಯಾನ ಸಂಸ್ಥೆ ದೂರಿನಲ್ಲಿ ಉಲ್ಲೇಖಿಸಿದೆ.
ಈ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿ ವ್ಯಕ್ತಿಯನ್ನು ಗುರುತಿಸಲು ಮತ್ತು ಈ ಬೆದರಿಕೆ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

