ಉಪಯುಕ್ತ ಸುದ್ದಿ

ಡೆಂಗೀ ಮತ್ತು ಚಿಕೂನ್ ಗುನ್ಯ ನಿಯಂತ್ರಣಕ್ಕೆ ಸಾರ್ವಜನಿಕರಿಂದ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅತ್ಯಗತ್ಯ

Share It

ಬೆಂಗಳೂರು :ಸಾರ್ವಜನಿಕರು ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸಿದಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಡೆಂಗೀ ಮತ್ತು ಚಿಕೂನ್ ಗುನ್ಯವನ್ನು ಖಂಡಿತವಾಗಿ ನಿಯಂತ್ರಣ ಮಾಡಬಹುದು. 

ಡೆಂಗೀ ಹಾಗೂ ಚಿಕೂನ್ ಗುನ್ಯ ಜ್ವರಗಳು ಸೋಂಕು ಹೊಂದಿದ ‘ಈಡೀಸ್ ಈಜಿಪ್ಟೈ’ ಎಂಬ ಲಾರ್ವಾ ಆಧಾರಿತ ಸೊಳ್ಳೆಯ ಕಡಿತದಿಂದ ಹರಡುತ್ತವೆ. ನಿಂತ ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳು ಸಾಧಾರಣವಾಗಿ ಹಗಲಿನ ವೇಳೆಯಲ್ಲಿ ಕಚ್ಚುತ್ತವೆ. ಈಡೀಸ್ ಈಜಿಪ್ಟೈ ಸೊಳ್ಳೆಯು ತನ್ನ ಜೀವಿತ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 8 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದರ ಮೊದಲ ಮೂರು ಹಂತಗಳಾದ ಮೊಟ್ಟೆ, ಲಾರ್ವಾ, ಮತ್ತು ಪ್ಯೂಪಾ ಪ್ರಕ್ರಿಯೆಯು ಸಂಪೂರ್ಣವಾಗಿ ನೀರಿನಲ್ಲಿಯೇ ನಡೆಯುತ್ತದೆ.  

ಸ್ವಚ್ಛ ನೀರು ನಿಲ್ಲುವಂತಹ ಸ್ಥಳಗಳೇ ಸೊಳ್ಳೆಗಳ ಪ್ರಮುಖ ಸಂತಾನೋತ್ಪತ್ತಿ ಕೇಂದ್ರಗಳಾಗುತ್ತವೆ.  ಆದ್ದರಿಂದ ಮೊದಲಿಗೆ ಈ ಸೊಳ್ಳೆಗಳ ಸಂತತಿ ಬೆಳೆಯದಂತೆ ಮಾಡುವ ಸಲುವಾಗಿ ಅವುಗಳ ಉತ್ಪತ್ತಿಯ ತಾಣಗಳಾದ ನಿಮ್ಮ ಮನೆಯ ಸುತ್ತ ಒಡೆದ ಟೈರ್ ಗಳು ಮತ್ತು ತೆಂಗಿನ ಚಿಪ್ಪುಗಳು , ಸಿಮೆಂಟ್ ಮತ್ತು ತೆರೆದ ಪ್ಲಾಸ್ಟಿಕ್ ತೊಟ್ಟಿಗಳು, ಬಕೆಟ್ಗಳು ಹಾಗೂ ನೀರಿನ ಡ್ರಂ/ಬ್ಯಾರಲ್ ಗಳು, ಏರ್ ಕೂಲರ್ ಗಳು, ಹೂವಿನ ಕುಂಡಗಳ ತಟ್ಟೆಗಳು, ಖಾಲಿ ಡಬ್ಬಗಳು, ಗಡಿಗೆ ಚೂರುಗಳು ಮತ್ತು ಬಯಲಿನಲ್ಲಿ ಬಿದ್ದಿರುವ ಒಡೆದ ಬಾಟಲಿಗಳಲ್ಲಿ ನೀರು ಶೇಖರಣೆಯಾಗದಿರುವಂತೆ ನೋಡಿಕೊಳ್ಳಬೇಕು.  

ಎಲ್ಲಾ ನೀರಿನ ತೊಟ್ಟಿಗಳು, ಡ್ರಂ, ಬ್ಯಾರಲ್ ಗಳು ಮತ್ತು ಏರ್ ಕೂಲರ್ ಗಳನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಿ, ಸ್ವಚ್ಛಗೊಳಿಸಿ ಮತ್ತೆ ಭರ್ತಿ ಮಾಡಬೇಕು ಅಥವಾ ಸರಿಯಾಗಿ ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸಿ ಸೂಕ್ತ ವಿಲೇವಾರಿ ಮಾಡಬೇಕು.  

ಇನ್ನು ಈ ಸೊಳ್ಳೆಗಳು ಹಗಲಿನ ಹೊತ್ತಿನಲ್ಲಿಯೇ ಕಚ್ಚುವುದರಿಂದ ಸೊಳ್ಳೆಗಳ ಕಡಿತದಿಂದ ದೂರವಿರಲು ಸೊಳ್ಳೆ ನಿರೋಧಕಗಳು (Mosquito Repellents) ಮತ್ತು ಸೊಳ್ಳೆ ಪರದೆಗಳನ್ನು ಬಳಸಬೇಕು. ಶಾಲೆಗಳೆಗಳಲ್ಲಿ ಮಕ್ಕಳು ಒಂದೇ ಕಡೆ ಬಹಳಷ್ಟು ಹೊತ್ತು ಕೂರುವುದರಿಂದ ಅವರಿಗೆ ಸೊಳ್ಳೆ ಕಡಿಯುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಸೊಳ್ಳೆ ನಿರೋಧಕ ಔಷಧಿಗಳನ್ನು ಹಚ್ಚಿ ಕಳುಹಿಸುವುದು ಸೂಕ್ತ.

ಡೆಂಗೀ ಅಥವಾ ಚಿಕೂನ್ ಗುನ್ಯ ರೋಗಾಣು ದೇಹವನ್ನು ಸೇರಿದಾಗ  ಹಠಾತ್ತನೆ ಅಧಿಕ ಜ್ವರ  ಕಂಡುಬರುತ್ತದೆ. ಜೊತೆಗೆ ತೀವ್ರ ತಲೆನೋವು  ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು  

ಮೈ ನೋವು ಹಾಗೂ ಕೀಲುಗಳಲ್ಲಿ ತೀವ್ರ ನೋವು, ವಾಕರಿಕೆ ಮತ್ತು ವಾಂತಿ  ಮುಂತಾದ ಲಕ್ಷಣಗಳು ಕಂಡುಬರುತ್ತದೆ.

 ಇಂತಹ ರೋಗ ಲಕ್ಷಣಗಳು ಕಂಡುಬಂದ ತಕ್ಷಣವೇ ಉಚಿತ ಚಿಕಿತ್ಸೆಗಾಗಿ ಹತ್ತಿರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಸ್ಪತ್ರೆಯನ್ನು ಸಂಪರ್ಕಿಸಿ, ವೈದ್ಯರಿಂದ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬಹುದು. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಈ ರೋಗಗಳಿಗೆ ಉಚಿತ ಚಿಕಿತ್ಸೆ ದೊರೆಯುತ್ತದೆ.  ಹೆಚ್ಚಿನ ಮಾಹಿತಿಗಾಗಿ ಆರೋಗ್ಯಾಧಿಕಾರಿ (ಪೂರ್ವ): 22975850  

ಆರೋಗ್ಯಾಧಿಕಾರಿ (ದಕ್ಷಿಣ): 22975750,  ಆರೋಗ್ಯಾಧಿಕಾರಿ (ಪಶ್ಚಿಮ): 22975650  ಹಾಗೂ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಗಳಾದ : 22660000, 22221188, 22100031 ಅನ್ನು ಸಂಪರ್ಕಿಸಬಹುದು.


Share It

You cannot copy content of this page