ರಾಜಕೀಯ ಸುದ್ದಿ

ಅರಣ್ಯ ಸಚಿವರು ಕಾಡಿನಿಂದ ಬಂದವರಾಗಲೇಬೇಕೆ? : ಹೆಚ್ ಡಿ ತಮ್ಮಯ್ಯ ಆಕ್ಷೇಪಕ್ಕೆ ಆರ್ ಕೆ ರಮೇಶ್ ಟಾಂಗ್ 

Share It

ಬೆಂಗಳೂರು: ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿಯವರು ಬೆಂಗಳೂರಿನವರು, ಅವರಿಗೆ ಅರಣ್ಯದ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿರುವ ಶಾಸಕರಾದ ತಮ್ಮಯ್ಯ ವಿರುದ್ಧ ಕಾಂಗ್ರೆಶ್ ಮುಖಂಡ ಆರ್ ಕೆ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅವರ ಹೇಳಿಕೆಗೆ ಟಾಂಗ್ ನೀಡಿರಿವ ಅವರು, ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನ ಆನೇಕಲ್ ತಾಲೂಕಿನವರು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಇರುವುದು ಇಲ್ಲೇ ಎಂಬುದನ್ನು ಮರೆತಿದ್ದೀರಾ? ಸಚಿವರ ಕಾರ್ಯಕ್ಷಮತೆಯನ್ನು ನಿರ್ಧರಿಸುವುದು ಅವರ ಕಾರ್ಯವೈಖರಿಯೇ ಹೊರತು ಅವರು ಹುಟ್ಟಿ ಬೆಳೆದ ಊರಲ್ಲ ತಮ್ಮಯ್ಯನವರೇ ಎಂದಿದ್ದಾರೆ. 

ನಿಮ್ಮ ತರ್ಕದ ಪ್ರಕಾರ,ಕಾನೂನು ಸಚಿವರು ವಕೀಲರೇ ಆಗಿರಬೇಕೇ? ಆರೋಗ್ಯ ಸಚಿವರು ವೈದ್ಯರೇ ಆಗಿರಬೇಕೇ? ಲೋಕೋಪಯೋಗಿ ಸಚಿವರು ಸಿವಿಲ್ ಎಂಜಿನಿಯರ್‌ಗಳೇ ಆಗಿರಬೇಕೇ? ಗಣಿ ಸಚಿವರು ಭೂವಿಜ್ಞಾನಿಗಳೇ ಆಗಿರಬೇಕೇ, ಜಲಸಂಪನ್ಮೂಲ ಸಚಿವರು ಜಲವಿಜ್ಞಾನಿಗಳೇ ಆಗಿರಬೇಕೇ?, ಕೃಷಿ ಸಚಿವರು ರೈತರೇ ಆಗಿರಬೇಕೇ?ಇಂಧನ ಇಲಾಖೆಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕೇ,ಹಣಕಾಸು ಸಚಿವರು ಅರ್ಥಶಾಸ್ತ್ರಜ್ಞ ಆಗಿರಬೇಕೇ? ಎಂದು ಕಿಡಿ ಕಾರಿದ್ದಾರೆ. 

ಗೃಹ ಸಚಿವರು ಪೊಲೀಸ್ ಅಧಿಕಾರಿಗಳೇ ಆಗಿರಬೇಕೇ?, ಕಾರ್ಮಿಕ ಇಲಾಖೆ ಸಚಿವರು ಕಾರ್ಮಿಕರೇ ಆಗಿರಬೇಕೆ ? ಪಶುಸಂಗೋಪನೆ ಇಲಾಖೆ ಸಚಿವರು ಪಶು ವೈದ್ಯರೇ ಆಗಿರಬೇಕೆ? ಸಚಿವರ ಸಾಮರ್ಥ್ಯವನ್ನು ಅಳೆಯಬೇಕಾದದ್ದು ಅವರ ಆಡಳಿತಾನುಭವ, ಕಾರ್ಯಕ್ಷಮತೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಜನಪರ ಕಾಳಜಿಯ ಆಧಾರದ ಮೇಲೆಯೇ ಹೊರತು ಅವರ ಊರಿನ ಆಧಾರದ ಮೇಲಲ್ಲ ಎಂದಿದ್ದಾರೆ. 

ಕಾಡಾನೆಗಳು ಬೇಲೂರಿನ ಕಾಫಿ ತೋಟಗಳಲ್ಲಿ, ಕೃಷಿ ಜಮೀನುಗಳಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಇರಬೇಕೇ? ಅಥವಾ ಸುಮಾರು 565 ಚದರ ಕಿಲೋಮೀಟರ್ (1.40 ಲಕ್ಷ ಎಕರೆ Core Forest) ವಿಸ್ತೀರ್ಣದ ಭದ್ರಾದಂತಹ ವಿಶಾಲ ಅರಣ್ಯ ಪ್ರದೇಶದಲ್ಲಿ ಇರಬೇಕೇ? ಆನೆಗಳ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸುವ ನೀವು, ಮಾನವ–ವನ್ಯಜೀವಿ ಸಂಘರ್ಷಕ್ಕೆ ಪರ್ಯಾಯ ಪರಿಹಾರವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದಿದ್ದಾರೆ. 

ಚಿಕ್ಕಮಗಳೂರಿನ ಶಾಸಕರಾಗಿ ಜನರ ಜೀವ ರಕ್ಷಣೆ ಹಾಗೂ ವನ್ಯಜೀವಿಗಳ ಸಂರಕ್ಷಣೆ ಎರಡನ್ನೂ ಖಾತ್ರಿಪಡಿಸಲು ನಿಮ್ಮ ಕೊಡುಗೆ ಏನು? ಈ ನಿಟ್ಟಿನಲ್ಲಿ ನೀವು ಕೈಗೊಂಡ ಕ್ರಮಗಳೇನು?ಅರಣ್ಯ ಸಂರಕ್ಷಣೆ ಮತ್ತು ಜನರ ಜೀವ ರಕ್ಷಣೆಯಂತಹ ಗಂಭೀರ ವಿಚಾರಗಳಲ್ಲಿ ವೈಯಕ್ತಿಕ ಟೀಕೆಗಳ ಬದಲು ವೈಜ್ಞಾನಿಕ ಚರ್ಚೆ, ರಚನಾತ್ಮಕ ಸಲಹೆ ಹಾಗೂ ಶಾಶ್ವತ ಪರಿಹಾರಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದ್ದಾರೆ.


Share It

You cannot copy content of this page