ಸುದ್ದಿ

ಢೋಕ್ರಾ ಕಲಾವಿದ ಸುಭಾಶ್‌ ಮಂಡಲ್‌ಗೆ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Share It

ಜನರಿಗೆ ಸೇರಿದ್ದನ್ನು ಉಳಿಸುವ ಜವಾಬ್ಧಾರಿ ಸರ್ಕಾರದ್ದು: ಬಿ.ಎಲ್‌.ಶಂಕರ್‌ 

ಸರ್ಕಾರ ನೀಡುವ ಅನುದಾನ ಕರೆಂಟ್‌ ಬಿಲ್‌ ಕಟ್ಟಲೂ ಸಾಲದು!

ಬೆಂಗಳೂರು: ಜಾನಪದವೂ ಸೇರಿದಂತೆ ಜನರಿಗೆ ಸೇರಿದ ಕಲೆ ಸಂಸ್ಕೃತಿಗಳನ್ನು ಉಳಿಸುವುದು ಸರ್ಕಾರದ ಜವಾಬ್ಧಾರಿ. ಆದರೆ ಅಬಕಾರಿ ಇಲಾಖೆಗೆ ನೀಡುವ ಆದ್ಯತೆಯು ಸರ್ಕಾರದಿಂದ  ಶೈಕ್ಷಣಿಕ ಸಾಂಸ್ಕೃತಿಕ ಲೋಕಕ್ಕೆ ಸಲ್ಲುತ್ತಿಲ್ಲವೆಂದು ಮಾಜಿ ಸಭಾಪತಿ ಹಿರಿಯ ರಾಜಕಾರಣಿ ಬಿ.ಎಲ್‌.ಶಂಕರ್‌ ಹೇಳಿದರು. 

ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಆನಪದ ಪರಿಷತ್‌ ವತಿಯಿಂದ ಕೊಡಮಾಡುವ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳದ ಢೋಕ್ರಾ ಕಲಾವಿದ ಸುಭಾಶ್‌ ಮಂಡಲ್‌ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. 

ನಾಡಿನ ಸಾಂಸ್ಕೃತಿಕ ಲೋಕ ಶ್ರೀಮಂತವಾಗಿದೆ. ಆದರೆ ಸಾಂಸ್ಕೃತಿಕ ಮನಸುಗಳು ಮಾತ್ರ ಬಡವಾಗುತ್ತಿವೆ. ರೈತರು, ಕೃಷಿ ಕಾರ್ಮಿಕರು ಮಾತ್ರ ಸಾಂಸ್ಕೃತಿಕ ಸಂಪತ್ತನ್ನು ಇತಿಹಾಸವನ್ನು ಉಳಿಸಿಕೊಂಡು ಬರಬಲ್ಲರು. ಆದರೆ ನಮ್ಮ ಸಂಸ್ಕೃತಿಯ ಬೇರು, ಮೂಲ ಸಂಸ್ಕೃತಿ ನಶಿಸಿ ಹೋಗುತ್ತಿದೆ. ವೇಗದ ನಗರೀಕರಣದಿಂದಾಗಿ ಮುಂದಿನ ಎರಡು ಮೂರು ದಶಕಗಳಲ್ಲಿ ಮೂಲ ಸಂಸ್ಕೃತಿಯೇ ನಾಶವಾಗುವ ಅಪಾಯವಿದೆ ಎಂದ ಬಿ.ಎಲ್‌.ಶಂಕರ್‌ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಮಾಡುತ್ತಿರುವ ಬದಲಾವಣೆಗಳನ್ನು ಆಕ್ಷೇಪಿಸಿದರು. ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಸರ್ಕಾರ ಆರಂಭಿಸಬೇಕಾಗಿ ಬಂದಿರುವ ಪರಿಸ್ಥಿತಿ ಅಥವಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಜೋಡಿಸಬೇಕಾದ ಮತ್ತು ಅದನ್ನು ಖಾಸಗಿಯವರಿಗೆ ವಹಿಸಿ ಕೊಡುವ  ಪರಿಸ್ಥಿತಿ ವಿಪರ್ಯಾಸಕರ, ಇದನ್ನು ಖಾಸಗಿಯವರಿಗೆ ನೀಡುವುದು ಲಾಭದ ಉದ್ದೇಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 

ರಾಜ್ಯದ ಜಾನಪದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಲು ಹೋರಾಡಿದ ಎಚ್‌.ಎಲ್‌.ನಾಗೇಗೌಡರಂತೆ  ಕೆಲವರಾದರೂ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜವಾಬ್ಧಾರಿಯೂ ಇದೆ ಎಂದು ಬಿ.ಎಲ್‌.ಶಂಕರ್‌ ಹೇಳಿದರು. 

ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಕೆ.ಎಂ.ವಸುಂಧರಾ ಜಾನಪದ ಪರಿಷತ್‌ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ, ಮ್ಯಾನೇಜಿಂಗ್‌  ಟ್ರಸ್ಟಿ ಆದಿತ್ಯನಂಜರಾಜ್‌ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಢೋಕ್ರಾ ಕಲಾವಿದ ಸುಭಾಶ್‌ ಮಂಡಲ್‌ ಮಾತನಾಡಿ ಬೇರೆ ರಾಜ್ಯದವನಾದರೂ ನನ್ನ ಕಲೆಯ ಮೂಲಕ ನನ್ನನ್ನು ಗುರುತಿಸಿದ ಜಾನಪದ ಪರಿಷತ್‌ಗೆ ತಾನು ಆಭಾರಿಯಾಗಿದ್ದೇನೆ ಎಂದರು. ಸುಭಾಶ್‌ ಮಂಡಲ್‌ ಅವರ ಕಲಾಕೃತಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. 

ಕರೆಂಟ್‌ ಬಿಲ್‌ಗೂ ಸಾಲುತ್ತಿಲ್ಲ: ಕುವೆಂಪು ಪ್ರತಿಷ್ಟಾನ ಮೊದಲಾದ ಸಂಸ್ಥೆಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಕರೆಂಟ್‌ ಬಿಲ್‌ ಕಟ್ಟಲೂ ಸಾಲುವುದಿಲ್ಲ ಎಂದು ಕುವೆಂಪು ಪ್ರತಿಷ್ಟಾನದ ಅಧ್ಯಕ್ಷರೂ ಆಗಿರುವ ಬಿ.ಎಲ್‌.ಶಂಕರ್‌ ಹೇಳಿದರು. ಕುಪ್ಪಳ್ಳಿಯ ಕುವೆಂಪು ಕವಿ ಮನೆಗೆ ಪ್ರತಿ ವರ್ಷವೂ ಎರಡೂವರೆ ಲಕ್ಷ ಜನ ಭೇಟಿ ನೀಡುತ್ತಿದ್ದು ಈ ಪ್ರವೇಶ ಶುಲ್ಕದಿಂದಲೇ ಪ್ರತಿಷ್ಟಾನದ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗುತ್ತಿದೆ ಎಂದರು. 

ಮುಂದಿನ ಚಿತ್ರ ಸಂತೆ ಜಾನಪದ ಕಲೆಗೆ ಸಮರ್ಪಣೆ: ಮುಂದಿನ ವರ್ಷದ ಚಿತ್ರಸಂತೆಯನ್ನು ಜಾನಪದ ಕಲೆಗೆ ಸಮರ್ಪಿಸುವುದಾಗಿ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ಬಿ.ಎಲ್‌.ಶಂಕರ್‌ ಘೋಷಿಸಿದರು. ನಮ್ಮ ನಾಡಿನ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಈ ಚಿತ್ರ ಸಂತೆ ಬಿಂಬಿಸಲಿದ್ದು ಜಾನಪದ ಪರಿಷತ್‌ ಸೇರಿದಂತೆ ಜಾನಪದ ತಜ್ಞರು, ಕಲಾವಿದರು ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವವರನ್ನೂ ಈ ಚಿತ್ರಸಂತೆಯಲ್ಲಿ ಒಳಗೊಳಿಸಲಾಗುವುದು ಎಂದು ಅವರು ತಿಳಿಸಿದರು. 

ಕನ್ನಡ ಸಂಸ್ಕೃತಿ ಇಲಾಖೆ ಅನುದಾನ ೨೫ ಕೋಟಿಗೆ ಬೇಡಿಕೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನವನ್ನು ಪ್ರಸ್ತುತ ೨೯೦ ಕೋಟಿಯಿಂದ ೫೦೦ ಕೋಟಿ ರೂಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಬಜೆಟ್‌ ಬೇಡಿಕೆ ಸಲ್ಲಿಸಲಾಗುವುದು ಎಂದು ಇಲಾಖೆ ನಿರ್ದೇಶಕರಾದ ಡಾ.ಕೆ.ಎಂ.ವಸುಂಧರಾ ತಿಳಿಸಿದರು. ರಾಜ್ಯದ ನೆಲ,ಜಲ ಭಾಷೆ ಸಂಸ್ಕೃತಿಯನ್ನು ಉಳಿಸಲು ಇರುವ ಸಂಸ್ಥೆಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಅವರು ಇದಕ್ಕಾಗಿ ಇಲಾಖೆ ಅನುದಾನವನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದರು. 


Share It

You cannot copy content of this page