ಉಪಯುಕ್ತ ಸುದ್ದಿ

ಬಡವರಿಗೆ 15 ಲಕ್ಷ ಉಚಿತ ನಿವೇಶನ, 1 ಲಕ್ಷ ಮನೆ: 30 ಸಾವಿರ ಸೈಟ್‌ಗೆ ಶೇ.50 ರಿಯಾಯಿತಿ ನೀಡಲು ರಾಜ್ಯ ಸಂಪುಟ ನಿರ್ಧಾರ

Share It

ಬೆಂಗಳೂರು: ರಾಜ್ಯಾದ್ಯಂತ ನಿವೇಶನರಹಿತ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ 15 ಲಕ್ಷ ಉಚಿತ ನಿವೇಶನ, ವಸತಿ ಇಲಾಖೆಯಿಂದ 1 ಲಕ್ಷ ಮನೆ, ಮುಖ್ಯಮಂತ್ರಿ ‘ನಮ್ಮ ಮನೆ’ ಯೋಜನೆಯಡಿ ಸಮುದಾಯದ ಶ್ರಮಿಕರು ಹಾಗೂ ಇಡಬ್ಲ್ಯೂಎಸ್‌ ಫಲಾನುಭವಿಗಳಿಗೆ ಶೇ.50 ರಷ್ಟು ರಿಯಾಯಿತಿಯಲ್ಲಿ 30,000 ನಿವೇಶನ ವಿತರಣೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಆ ಮೂಲಕ ವಸತಿರಹಿತರಿಗೆ ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚು ನಿವೇಶನ ನೀಡುವ ಮೂಲಕ ‘ಭೂ ಗ್ಯಾರಂಟಿ’ ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕಂದಾಯ ಇಲಾಖೆಯಿಂದ ರಾಜ್ಯಾದ್ಯಂತ 15 ಲಕ್ಷ ನಿವೇಶನ ನೀಡಲು ತೀರ್ಮಾನ ಮಾಡಲಾಗಿದೆ. ಈಗಾಗಲೇ ಇದಕ್ಕಾಗಿ 24,000 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಆದರೆ, ಬಡಾವಣೆ ಅಭಿವೃದ್ಧಿಗೆ ಅಗತ್ಯವಿರುವ ಹಣದ ವೆಚ್ಚದ ವಿವರವನ್ನು ಸಂಪುಟ ಕೇಳಿದ್ದು, ಸದ್ಯದಲ್ಲೇ ಹಣಕಾಸಿನ ಅಗತ್ಯತೆಯ ಅಂಶಗಳನ್ನು ಸೇರಿಸಿ ಜಾರಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಬಿಪಿಎಲ್‌ ಕಾರ್ಡ್‌ದಾರರಿಗೆ, ನಿವೇಶನರಹಿತರು, ಆದಾಯ ಮಿತಿ ಇವೆಲ್ಲವನ್ನೂ ಪರಿಗಣಿಸಿ ನಿವೇಶನ ನೀಡಲಾಗವುದು. ಮೊದಲ ಹಂತದಲ್ಲಿ 5 ಲಕ್ಷ ನಿವೇಶನ, ಎರಡನೇ ಹಂತದಲ್ಲಿ 5 ಲಕ್ಷ ನಿವೇಶನ, 3ನೇ ಹಂತದಲ್ಲಿ 5 ಲಕ್ಷ ನಿವೇಶನ ಸೇರಿ ಒಟ್ಟು 15 ಲಕ್ಷ ನಿವೇಶನ ನೀಡಲಾಗುತ್ತದೆ. ನಮ್ಮ ಸರ್ಕಾರದ ಇದೇ ಅವಧಿಯಲ್ಲಿ ಅಷ್ಟೂ ನಿವೇಶನ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಭೂ ಗ್ಯಾರಂಟಿ ಭರವಸೆ ನೀಡಿದ್ದೇವೆ ಎಂದರು.

1 ಲಕ್ಷ ಮನೆ ನಿರ್ಮಾಣ: ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಧಾರಿತವಾಗಿ 2,241 ಕೋಟಿ ರು. ವೆಚ್ಚದಲ್ಲಿ ಒಂದು ಲಕ್ಷ ಹೊಸ ಮನೆಗಳ ನಿರ್ಮಾಣ ಗುರಿ ನಿಗದಿ ಮಾಡಲು ಸಂಪುಟ ತೀರ್ಮಾನಿಸಿದೆ. ಇದೇ ವೇಳೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.20 ಲಕ್ಷ ರು.ಗಳಿಂದ 2 ಲಕ್ಷ ರು. ಸಹಾಯಧನ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 2 ಲಕ್ಷ ರು.ಗಳಿಂದ 3 ಲಕ್ಷ ರು.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನ ಮಾಡಲಾಗುವುದು ಎಂದು ಡಾ.ಜಿ. ಪರಮೇಶ್ವರ್‌ ಹೇಳಿದರು.

ನಮ್ಮ ಮನೆ ಯೋಜನೆ: ಮುಖ್ಯಮಂತ್ರಿ ಅವರ ‘ನಮ್ಮ ಮನೆ’ ಯೋಜನೆಯಡಿ ರಾಜ್ಯಾದ್ಯಂತ ಶ್ರಮಿಕರಿಗೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ 30/40 ಅಡಿ ಅಳತೆಯ 30,000 ನಿವೇಶನ ಒದಗಿಸಲು ಸಂಪುಟ ತೀರ್ಮಾನಿಸಿದೆ. ಈ ಯೋಜನೆಯಡಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಅನುಗುಣವಾಗಿ 1,655 ಕೋಟಿ ರು. ವೆಚ್ಚದಲ್ಲಿ 6,600 ಎಕರೆ ಜಮೀನಿನಲ್ಲಿ 93,240 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಸಮುದಾಯದ ಶ್ರಮಿಕರಿಗೆ ಹಾಗೂ ಇಡಬ್ಲ್ಯೂಎಸ್‌ ಫಲಾನುಭವಿಗಳಿಗೆ ಶೇ.50 ರಷ್ಟು ರಿಯಾಯಿತಿಯಲ್ಲಿ 30,000 ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಪರಮೇಶ್ವರ್ ಹೇಳಿದರು.


Share It

You cannot copy content of this page