ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇಂದು ಐತಿಹಾಸಿಕ ಮಾನವ ಸರಪಳಿ ಆಂದೋಲನ ನಡೆಯಲಿದ್ದು, ಚಾಮರಾಜನಗರ ದಿಂದ ಬೀದರ್ ವರೆಗೆ ಮಾನವ ಸರಪಳಿ ನಿರ್ಮಾಣವಾಗಲಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಯ40 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಈ ನಡುವೆ ಪ್ರಜಾಪ್ರಭುತ್ವ ದಿನದ ಸವಿನೆನಪಿಗಾಗಿ ಒಂದು ಲಕ್ಷ ಸಸಿಗಳನ್ನು ನೆಡಲಾಗುತ್ತದೆ. ಚಾಮರಾಜನಗರ ದಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದ ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಕೈಜೋಡಿಸಿವೆ. ಶಾಲಾ ಮಕ್ಕಳು, ಅಂಗನವಾಡಿ ಶಿಕ್ಷಕಿಯರು, ವಿವಿಧ ಇಲಾಖೆಗಳ ಸರಕಾರಿ ನೌಕರರು, ಕೆಲ ಸಂಘಟನೆಗಳ ಸದಸ್ಯರು, ಸ್ವಯಂ ಸೇವಕರು ಭಾಗವಹಿಸಲಿದ್ದಾರೆ.

