ಅಪರಾಧ ಸುದ್ದಿ

ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದು ಬಾವಿಯಲ್ಲಿ ಹೂತಿಟ್ಟಿದ್ದ ಪಾಪಿ ಪತಿರಾಯ

Share It

ಕೊಪ್ಪಳ: ಮೂರು ತಿಂಗಳ ಗರ್ಭಿಣಿ ಎಂಬುದನ್ನು ನೋಡದೆ ಮಡದಿಯನ್ನು ಕೊಂದ ಪಾಪಿ ಪತಿಯೊಬ್ಬ ಆಕೆಯ ಶವವನ್ನು ತೋಟದ ಬಾವಿಯಲ್ಲಿ ಮುಚ್ಚಿಟ್ಟು ಏನು ಗೊತ್ತಿಲ್ಲದ ರೀತಿ, ತಾವೇ ದೂರು ನೀಡಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಬು ಪರಿಯವರ ಎಂಬ ವ್ಯಕ್ತಿಯೇ ಪತ್ನಿಯನ್ನು ಕೊಂದ ಆರೋಪಿ. ಸಂಗೀತಾ ಎಂಬಾಕೆಯೇ ಪತಿಯ ಕೈಯ್ಯಿಂದಲೇ ಕೊಲೆಯಾದ ಗರ್ಭಿಣಿ ಮಹಿಳೆ ಎನ್ನಲಾಗಿದೆ.

ಕಳೆದ ಏಳು ವರ್ಷಗಳ ಹಿಂದೆ ಸಂಗೀತಾಗಳನ್ನು ಮದುವೆಯಾಗಿದ್ದ ಬಾಬು, ಆಗಾಗ ಮಡದಿಯ ಜತೆಗೆ ಜಗಳ ಮಾಡಿಕೊಳ್ಳುತ್ತಿದ್ದ. ಈ ಬಗ್ಗೆ ಸಂಗೀತಾ ಪೋಷಕರು ಅನೇಕ ಬಾರಿ ಬುದ್ದಿ ಹೇಳಿದ್ದರು. ಆದರೂ ಚಾಳಿ ಬಿಡದ ಬಾಬು, ಸಂಗೀಳಾನ್ನು ಪೀಡಿಸುತ್ತಿದ್ದ.

ಇದೀಗ ಸಂಗೀತಾ ಗರ್ಭಿಣಿಯಾಗಿದ್ದು, ಈಗಲಾದರೂ ಅಳಿಯ ಸರಿಹೋಗಬಹುದು ಎಂಬುದು ಸಂಗೀತಾ ಪೋಷಕರ ಅಭಿಪ್ರಾಯವಾಗಿತ್ತು. ಹೀಗಾಗಿ, ಮಗಳಿಗೆ ಬುದ್ದಿ ಹೇಳಿ ಗಂಡನ ಮನೆಯಲ್ಲಿ ಬಿಟ್ಟಿದ್ದರು. ಆದರೆ, ಮೂರು ತಿಂಗಳ ಗರ್ಭಿಣಿ ಎಂಬ ಧಯೆಯೂ ಇಲ್ಲದೆ ಗಂಡ ಆಕೆಯ ಪ್ರಾಣ ತೆಗೆದುಹಾಕಿದ್ದಾನೆ.

ಸೆ. 16 ರಂದು ಹೆಂಡತಿಯೊಂದಿಗೆ ಜಗಳ ತೆಗೆದಿದ್ದ ಬಾಬು, ಆಕೆಯನ್ನು ತೋಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯನ್ನು ಕೊಲೆ ಮಾಡಿ, ಆಕೆಯ ಶವವನ್ನು ತೋಟದ ಬಾವಿಯಲ್ಲಿ ಚೀಲಕ್ಕೆ ಕಟ್ಟಿ ಬಿಸಾಕಿದ್ದಾನೆ. ಅನಂತರ ತಮ್ಮ ಪತ್ನಿ ಕಾಣಿಯಾಗಿರುವ ಕುರಿತು ಕೊಪ್ಪಳ ಗ್ರಾಮಾಂತರ ಠಾಣೆಯಲ್ಲಿ ತಾನೇ ದೂರು ನೀಡಿದ್ದಾನೆ.

ಪೊಲೀಸರು ಪ್ರಕರಣದ ಕುರಿತು ವಿಚಾರಣೆ ನಡೆಸಿದಾಗ ಪತಿಯ ಕ್ರೌರ್ಯದ ಬಗ್ಗೆ ಅನುಮಾನ ಬಂದಿದೆ. ಈತ ಆಗಾಗ ಪತ್ನಿಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಸ್ಥಳೀಯರು ಬಾಯ್ಬಿಟ್ಟಿದ್ದಾರೆ. ಆಗ ಪೊಲೀಸರು ಪತಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪಾಪಿ ಪತಿ ಸತ್ಯ ಬಾಯ್ಬಿಟ್ಟಿದ್ದಾನೆ.

ನೆನ್ನೆ ಸಂಜೆ ವೇಳೆಗೆ ಶವ ತೋಟದ ಬಾಯಿಯಲ್ಲಿರುವುದು ಗೊತ್ತಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಶವ ಹೊರತೆಗೆದು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಬಾಬು ವನ್ನು ವಶಕ್ಕೆ ಪಡೆದಿರುವ ಡಿವೈಎಸ್ ಪಿ ನೇತೃತ್ವದ ತಂಡ ತನಿಖೆ ಮುಂದುವರಿಸಿದೆ.


Share It

You cannot copy content of this page