ಬಳ್ಳಾರಿ: ನಟ ದರ್ಶನ್ ಅವರಿಗೆ ಬಳ್ಳಾರಿ ಜೈಲಿನಲ್ಲಿ ಸೌಲಭ್ಯ ನೀಡುತ್ತಿಲ್ಲ ಎಂದು ಜೈಲು ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.
ನಿಯಮಾನುಸಾರ ದರ್ಶನ್ ಅವರ ಸೆಲ್ ನಲ್ಲಿ ಟಿವಿ ಹಾಗೂ ಸರ್ಜಿಕಲ್ ಚೇರ್ ನೀಡಲಾಗಿದೆ. ದರ್ಶನ್ ದಿಂಬು, ಬೆಡ್‌ಶೀಟ್ ಮತ್ತಿತರ ಬೇಡಿಕೆ ಇಡುತ್ತಿದ್ದಾರೆ. ಜೈಲು ನಿಯಮಗಳ ಪ್ರಕಾರ ದರ್ಶನ್ ಅವರನ್ನು ನೋಡೊಕೊಳ್ಳಲಾಗುತ್ತಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ, ದರ್ಶನ್ ಅವರ ತಾಯಿ ಮತ್ತು ಕುಟುಂಬದ ಇತರ ಸದಸ್ಯರು ಜೈಲಿನ ಸಂದರ್ಶಕರ ಕೊಠಡಿಯಲ್ಲಿ ದರ್ಶನ್ ಅವರನ್ನು ಭೇಟಿಯಾದರು.
ದರ್ಶನ್ ಅವರು ಜೈಲಿನಲ್ಲಿನ ಅನುಭವಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡ ನಂತರ, ಅವರು ತಮ್ಮ ವಕೀಲರೊಂದಿಗೆ ಈ ವಿಷಯವನ್ನು ಚರ್ಚಿಸಿದ್ದಾರೆ.
ದರ್ಶನ್ ಅವರನ್ನು ವಿಚಾರಣಾಧೀನ ಕೈದಿಯಂತೆ ನಡೆಸಿಕೊಳ್ಳುತ್ತಿಲ್ಲ ಎಂದು ಕುಟುಂಬದವರು ನಂಬಿದ್ದು, ಹೀಗಾಗಿ ಎಸ್‌ಎಚ್‌ಆರ್‌ಸಿಗೆ ದೂರು ಸಲ್ಲಿಸುವಂತೆ ಅವರ ವಕೀಲರು ಸೂಚಿಸಿದ್ದಾರೆ ಎನ್ನಲಾಗಿದೆ.