ಮುಂಬೈ: ಅಂಗಡಿ ಮತ್ತು ವಸತಿ ಸಮುಚ್ಚಯ ಇದ್ದ ಎರಡು ಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಮಕ್ಕಳು ಸೇರಿ ಏಳು ಜನರು ಸಾವನ್ನಪ್ಪಿದ್ದಾರೆ.
ಚೆಂಬೂರ್ ಪ್ರದೇಶದ ಸಿದ್ಧಾರ್ಥ ಕಾಲೋನಿಯಲ್ಲಿ ಭಾನುವಾರ ಮುಂಜಾನೆ ಅವಘಡ ಸಂಭವಿಸಿದ್ದು, ಮೊದಲ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ನಂತರ ಅಂಗಡಿಗಳಲ್ಲಿ ಇದ್ದ ವೈರಿಂಗ್ ಸಾಮಗ್ರಿಗಳಿಗೆ ತಾಗಿದ ಬೆಂಕಿ ಎರಡನೇ ಮಹಡಿಗೆ ಆವರಿಸಿದೆ ಎನ್ನಲಾಗಿದೆ.
ಈ ವೇಳೆ ಮೊದಲ ಮಹಡಿಯ ಮನೆಗಳಲ್ಲಿ ವಾಸವಿದ್ದವರು ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದಾರೆ. ಗಂಭೀರವಾಗಿ ಗಾಯಗೊಂಡ ಐವರನ್ನು ರಾಜವಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಿಸದೆ ಐವರು ಮೃತಪಟ್ಟಿದ್ದಾರೆ.
ಮೃತರನ್ನು ಪಾರಿಸ್ ಗುಪ್ತಾ(7), ಮಂಜು ಪ್ರೇಮದ ಗುಪ್ತಾ(30), ಅನಿತಾ ಗುಪ್ತಾ(30) ಮತ್ತು ನರೇಂದ್ರ ಗುಪ್ತಾ(10) ಎಂದು ಗುರುತಿಸಲಾಗಿದೆ. ಇನ್ನುಳಿದವರ ಮಾಹಿತಿ ಲಭ್ಯವಾಗಿಲ್ಲ. ಘಟನೆಗೆ ನಿಖರ ಕಾರಣ ಏನೆಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ.