ಬೆಂಗಳೂರು: ಬಿಗ್ ಬಾಸ್ ನಲ್ಲಿ ಸ್ವರ್ಗ ನರಕದ ಕಾನ್ಸೆಪ್ಟ್ ಇದೀಗ ಪೊಲೀಸರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ರಾಮನಗರ ಪೊಲೀಸರು ಬಿಗ್ ಬಾಸ್ ಆಯೋಜಕರಿಗೆ ನೊಟೀಸ್ ನೀಡಿದ್ದು, ಠಾಣೆ ಬಂದು ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಕುಂಬಳಗೂಡು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ಹೂಗಾರ್, ಬಿಗ್ ಬಾಸ್ ಮನೆಗೆ ತೆರಳಿ ನೊಟೀಸ್ ಕೊಟ್ಟಿದ್ದಾರೆ. ನರಕ ಮತ್ತು ಸ್ವರ್ಗದ ವಿಚಾರವಾಗಿ ನಡೆದಿರುವ ಒಟ್ಟಾರೆ ರಾ ಪೊಟೇಜ್ ನೀಡುವಂತೆ ಆಯೋಜಕರಿಗೆ ಸೂಚನೆ ನೀಡಲಾಗಿದೆ.
ಬಿಗ್ ಬಾಸ್ ನಲ್ಲಿ ಮಹಿಳೆಯರ ಘನತೆಗೆ ಧಕ್ಕೆಯಾಗಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆಯೋಜಕರನ್ನು ವಿಚಾರಣೆಗೆ ಕರೆದಿದ್ದಾರೆ.
ಬಿಗ್ ಬಾಸ್ ನ ನರಕದಲ್ಲಿ ವಾಸಿಸುತ್ತಿದ್ದ ಮಹಿಳೆಯರಿಗೆ ಶೌಚಾಲಯ, ಮಲಗುವ ವ್ಯವಸ್ಥೆ ನೀಡುವಲ್ಲಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬುದು ಕೆಲವರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ನಿರೂಪಕ ಸುದೀಪ್ ಕೂಡ ಸ್ಪರ್ಧಿಗಳನ್ನು ವಿಚಾರಿಸಿ ಮಾಹಿತಿ ಪಡೆದಿದ್ದರು.
ಆದರೆ, ಸ್ಪರ್ಧಿಗಳು ಯಾವುದೇ ತೊಂದರೆ ಇಲ್ಲ ಎಂದಿದ್ದರು. ಆದರೆ, ಅಲ್ಲಲ್ಲಿ ಊಟ ಸಾಲುತ್ತಿಲ್ಲ, ಮಲಗಲು ಕಷ್ಟ, ಶೌಚಾಲಯ ಕ್ಕೆ ಹೋಗುವುದು ಕಷ್ಟ ಎಂಬ ಸಂಭಾಷಣೆಗಳನ್ನು ತಮ್ಮತಮ್ಮಲೇ ಮಾತನಾಡಿಕೊಂಡಿರುವುದು ಪ್ರಸಾರವಾಗಿದೆ. ಈ ಹಿನ್ನೆಲೆಯಲ್ಲಿ ನೊಟೀಸ್ ನೀಡಲಾಗಿದೆ.

