ದೇವನಹಳ್ಳಿ: ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಮಹಾತ್ಮಾ ಗಾಂಧಿ ಹೋರಾಟ ಮಾಡಿದರು ಅವರ ಉದ್ದೇಶ ಭಾರತ ಆಡಳಿತದ ಹಸ್ತಾಂತರದ ಮೂಲಕ ಬಲಾಢ್ಯ ಗುಂಪೊಂದು ಅದನ್ನು ಮುನ್ನಡೆಸಬೇಕು ಎಂಬುದಾಗಿತ್ತೆ ವಿನಃ ದೇಶದಲ್ಲಿ ಸಾವಿರಾರು ವರ್ಷಗಳಿಂದ ಜಾತಿ ವ್ಯವಸ್ಥೆಗಳ ಮೂಲಕ ಪೋಷಿಸಿಕೊಂಡು ಬಂದ ತಾರತಮ್ಯ ನೀತಿಗಳನ್ನು ಹೋಗಲಾಡಿಸುವ ಉದ್ದೇಶ ಇರಲಿಲ್ಲ ಇಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಕಾರಣದಿಂದ ದೇಶದ ಬಹುತೇಕ ತಳವರ್ಗದ ಜನ ಸಮುದಾಯಗಳ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ಕೊನೆಗಾಣಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ 1918 ರಿಂದಲೂ ಮನವರಿಕೆ ಮಾಡಲು ಅವಿರತವಾಗಿ ಶ್ರಮಿಸಿದ್ದರ ಫಲವಾಗಿ ಶಿಕ್ಷಣ, ಉದ್ಯೋಗ, ಮೀಸಲಾತಿ ಗಳನ್ನು ಪಡೆಯಲು ಸಾಧ್ಯವಾಯಿತು, ಎಂದು ಅಂಬೇಡ್ಕರ್ ವಿಚಾರಧಾರೆಯ ಸಾಮಾಜಿಕ ಚಿಂತಕ ಸಂಶೋಧಕ ಡಾ. ಶಿವಕುಮಾರ್ ತಿಳಿಸಿದರು.
ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಭೋಧಿ ಟ್ರೀ ವತಿಯಿಂದ ದೇವನಹಳ್ಳಿಯ ಕುಂಭೇಶ್ವರ ಪಾರ್ಟಿ ಹಾಲ್ ನಲ್ಲಿ ಅಂಬೇಡ್ಕರ್, ಶಿಕ್ಷಣ ಮತ್ತು ಉದ್ಯೋಗ ವಿಚಾರವಾಗಿ ಅವರು ಉಪನ್ಯಾಸ ನೀಡಿದರು.