ಮಂಡ್ಯ, ಏಪ್ರಿಲ್ 21: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲು 4 ದಿನಗಳು ಮಾತ್ರ ಬಾಕಿ ಇದೆ. ಈ ಮಧ್ಯೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ರವೀಂದ್ರ ವೇದಿಕೆ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ಗೆ ಬಿಗ್ ಶಾಕ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಡಾ.ರವೀಂದ್ರ ಅವರು ವಾಗ್ದಾಳಿ ಮಾಡಿದ್ದಾರೆ.
ಇತ್ತೀಚೆಗೆ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದ ಡಾ. ರವೀಂದ್ರ, ಇದೀಗ ಭಾನುವಾರದಂದು ಶ್ರೀರಂಗಪಟ್ಟಣದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.
ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಬೇಟೆ ನಡೆಸುತ್ತಿರುವ ಎಚ್.ಡಿ ಕುಮಾರಸ್ವಾಮಿ ಇಂದು ಶ್ರೀರಂಗಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದು, ಮುಂದಿನ 5 ವರ್ಷಗಳಲ್ಲಿ ಕಾವೇರಿ ಸಮಸ್ಯೆ ಬಗೆಹರಿಸದಿದ್ದರೆ ನಿಮ್ಮ ಬಳಿ ಮತ ಕೇಳಲು ಬರುವುದಿಲ್ಲ ಎಂದು ಎಚ್.ಡಿ.ಕೆ ಸವಾಲು ಹಾಕಿದರು.
“’ಜನ ಕೊಟ್ಟ ಶಕ್ತಿಯಿಂದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಯ್ತು. ಕಾಂಗ್ರೆಸ್‌ನ ಅಸಹಕಾರದ ನಡುವೆಯೂ ರೈತರ ಸಾಲಮನ್ನಾ ಮಾಡಿದೆ. FDAಗಿಂತಲೂ ನನ್ನನ್ನು ಕಾಂಗ್ರೆಸ್ನವರು ಕೀಳಾಗಿ ಕಂಡರು. ಕಾಂಗ್ರೆಸ್ನವರು ನನಗೆ ತುಂಬಾ ಅವಮಾನ ಮಾಡಿದರು. ನೀವೇನು ಕೊಟ್ಟಿದ್ದೀರಿ ಡಿ.ಕೆ.ಶಿವಕುಮಾರ್ ಅವರೇ? ಎಂದು ಎಚ್.ಡಿ.ಕೆ ಪ್ರಶ್ನಿಸಿದರು.
“ನಮ್ಮ ನೀರು ನಮ್ಮ ಹಕ್ಕು ಅಂತಾ ಹೋರಾಟ ಮಾಡಿದ್ರಿ. ನಮ್ಮ ನೀರು ತಮಿಳುನಾಡಿನ ಹಕ್ಕು ಅಂತಾ ನೀರು ಬಿಟ್ರಿ. ಭತ್ತ ಬೆಳೆಯಬೇಡಿ ಎಂದು ಹೇಳಿದ ಕೃಷಿ ಸಚಿವ ಯಾರು? ಇದಕ್ಕೇನಾ ನಿಮಗೆ ಜನ ಅಧಿಕಾರ ಕೊಟ್ಟಿರೋದು? ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದ ಕೇಳ್ತಿದ್ದೀರಿ. ನೀವು ಅಧಿಕಾರದಲ್ಲಿ ಇರೋದು ಯಾವುದಕ್ಕೆ? ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.