ಧಾರವಾಡ: ನಗರದಲ್ಲಿ ಅಪಘಾತದಲ್ಲಿ ಆಟೋ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಧಾರವಾಡದ ಸಂಪಿಗೆನಗರದಲ್ಲಿ ನಡೆದ ಘಟನೆಯಲ್ಲಿ ಆಟೋ ಚಾಲಕ ರಮೇಶ್ ಹಂಚಿನಮನಿ (35) ಹಾಗೂ ಮರೆವ್ವ ಹಂಚಿನಮನಿ ಎಂಬುವವರು ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ರೇಣುಕಾ(25) ಪೃಥ್ವಿ(4) ಹಾಗೂ ಪ್ರಣವ(6) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರೆಲ್ಲ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಬ್ಯಾಡಗಿಗೆ ಹೊರಡಲು ರೈಲು ನಿಲ್ದಾಣದ ಕಡೆಗೆ ಹೊರಟಿದ್ದರು. ಅವರನ್ನು ಬಿಡಲು ಹೊರಟಿದ್ದ ಆಟೋ ಚಾಲಕ ಬೀಡಾಡಿ ದನಗಳು ಅಡ್ಡ ಬಂದ ಕಾರಣಕ್ಕೆ ಆಟೋವನ್ನು ಬಲಕ್ಕೆ ತಿರುಗಿಸಿದ್ದ. ಈ ವೇಳೆ ಲಾರಿಗೆ ಡಿಕ್ಕಿ ಹೊಡೆದ ಆಟೋ ಉರುಳಿಬಿದ್ದಿತ್ತು.
ಆಟೋ ಉರುಳಿ ಬೀಳುತ್ತಿದ್ದಂತೆ ಆಟೋದಲ್ಲಿದ್ದವರೆಲ್ಲ ಅದರಡಿ ಸಿಲುಕಿಕೊಂಡಿದ್ದರು. ಧಾರವಾಡ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಿಕೊಟ್ಟರು. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.

