ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಪಿ ಯೋಗೇಶ್ವರ್ ಅವರಿಗೆ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಅವರು ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಮೂಲಕ ಯೋಗೇಶ್ವರ್ ಅವರು ಕಾಂಗ್ರೆಸ್ ನಿಂದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.
ಕಾಂಗ್ರೆಸ್ ಸೇರ್ಪಡೆಗೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ. ವಾಟ್ಸಾಪ್ ಮೂಲಕ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ಈ ದಿನ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ.
ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಬೇಕೆಂದು ಕೋರುತ್ತೇನೆ. ಇಲ್ಲಿಯವರೆಗೆ ನನಗೆ ತಾವು ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

