ಸುದ್ದಿ

ಆತ್ಮಜ್ಯೋತಿಯನ್ನು ಬೆಳಗುವುದೇ ವಿದ್ಯೆ : ಡಾ. ನಾರಾಯಣ ನಾಯ್ಕ

Share It

ಬೆಳಗಾವಿ : ಲೌಕಿಕ ಉನ್ನತಿಗಿಂತ ಆತ್ಮದ ಉನ್ನತಿ ಮುಖ್ಯ. ಆತ್ಮದ ಉನ್ನತಿ ವ್ಯಕ್ತಿಯನ್ನು ಮಹಾತ್ಮನಾಗಿಸುತ್ತದೆ. ಈ ಆತ್ಮದ ಉನ್ನತಿ ಸಿಗುವುದು ಉತ್ತಮ ವಿದ್ಯೆ ಮತ್ತು ಸಂಸ್ಕಾರದಿಂದ ಎಂದು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ನಾರಾಯಣ ನಾಯ್ಕ ಅಭಿಪ್ರಾಯಪಟ್ಟರು.

ನಗರದ ಕೆ.ಎಲ್.ಇ. ಸಂಸ್ಥೆಯ ಗಿಲಗಂಚಿ ಅರಟಾಳ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2026- 27ನೇ ಸಾಲಿನ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಎನ್. ಎಸ್. ಎಸ್. ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆ ಎಂದರೆ ಕೇವಲ ಅಕ್ಷರಜ್ಞಾನವಲ್ಲ. ಅದು ಮನುಷ್ಯನ ಒಳಗಿರುವ ಜ್ಞಾನ, ವಿವೇಕ, ಸಂಸ್ಕಾರ, ಮಾನವೀಯತೆ ಮತ್ತು ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಶಕ್ತಿ. ಹೊರಗಿನ ಕತ್ತಲೆಯನ್ನು ಒಂದು ದೀಪ ದೂರ ಮಾಡಬಹುದು. ಆದರೆ ಅಜ್ಞಾನ, ಅಂಧಶ್ರದ್ಧೆ, ದ್ವೇಷ, ಸ್ವಾರ್ಥ ಮತ್ತು ಭಯ ಎಂಬ ಒಳಗಿನ ಕತ್ತಲೆಯನ್ನು ದೂರ ಮಾಡುವ ಶಕ್ತಿ ವಿದ್ಯೆಗೆ ಮಾತ್ರ ಇದೆ. ಆದ್ದರಿಂದ ವಿದ್ಯೆಯು ಆತ್ಮಜ್ಯೋತಿಯನ್ನು ಬೆಳಗಿಸುವ ಸಾಧನವಾಗಿದೆ.

ಇಂದಿನ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಮಾಹಿತಿಯ ಕೊರತೆಯಿಲ್ಲ. ಆದರೆ ಮಾಹಿತಿ ಮಾತ್ರ ಸಾಕಾಗುವುದಿಲ್ಲ. ಅದನ್ನು ಸರಿಯಾಗಿ ಬಳಸುವ ವಿವೇಕ, ನೈತಿಕತೆ ಮತ್ತು ಮಾನವೀಯತೆ ಇರಬೇಕು. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮಾತ್ರ ಕಲಿಯದೆ, ಜೀವನಕ್ಕಾಗಿ ಕಲಿಯಬೇಕು. ಪುಸ್ತಕಗಳ ಜೊತೆಗೆ ಬದುಕನ್ನೂ ಆನಂದಿಸಿ.

ವಿದ್ಯಾರ್ಥಿಗಳು ಕಲಿಯುವ ಶಿಕ್ಷಣ ನಿಮ್ಮ ಬದುಕು ಮತ್ತು ಮನೆಯ ಪರಿಸ್ಥಿತಿ ಬದಲಾಯಿಸಬೇಕು, ಭವ್ಯ ಭಾರತದ ಕನಸಿಗೆ ಅದು ಹೆಗಲಾಬೇಕು, ಆಗ ಜೀವನ ಸಾರ್ಥಕವಾಗುತ್ತದೆ. ಬೇರೆ ಬೇರೆ ಕಾಲೇಜು ಮತ್ತು ವಿಭಿನ್ನ ಪರಿಸರದ ಹಿನ್ನೆಲೆಯಲ್ಲಿ ಈ ಕಾಲೇಜಿಗೆ ಬಂದಿದ್ದೀರಿ. ಪಿಯುಸಿ ಎಂಬುದು ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ. ಇದು ಭವಿಷ್ಯದ ಮುನ್ನೋಟ, ಶೈಕ್ಷಣಿಕ ಜ್ಞಾನ , ಕೌಶಲ್ಯಗಳು ವೃತ್ತಿಜೀವನದ ಯಶಸ್ಸಿಗೆ ಭೂಮಿಕೆಯಾಗಲಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಿ. ಎಸ್. ಪವಾರ್ ಅವರು ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು , ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಲಿದೆ. ನೀವು ಯಾವುದೇ ಕೆಲಸ ಮಾಡಿದರೂ ಇಷ್ಟ ಪಟ್ಟು ಮಾಡಬೇಕು. ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ. ಅದುವೇ ನಿಮ್ಮನ್ನು ಸಾಧನೆಯ ಪಥಕ್ಕೆ ಸೇರಿಸುತ್ತದೆ.

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಾಲೇಜಿನ ನಿಯಮಗಳನ್ನು ಪಾಲಿಸಬೇಕು. ಇತಿಹಾಸದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇದ್ದಾರೆ. ಸಮಾಜ ಒಳ್ಳೆಯವರನ್ನು ಸದಾ ಸ್ಮರಿಸಿಕೊಳ್ಳುತ್ತದೆ. ಒಬ್ಬ ಉತ್ತಮ ವ್ಯಕ್ತಿಯಾಗಲು ಇದೊಂದು ಉತ್ತಮ ವೇದಿಕೆ. ವಿದ್ಯೆ ಜೊತೆಗೆ ಸಂಸ್ಕಾರವು ಇರಲಿ. ಗುರುವಿನ ಮಾರ್ಗದರ್ಶನದಲ್ಲಿ ಸಾಗಿದ ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಸಮಾಜಕ್ಕೆ ಒಳ್ಳೆಯವರಾಗಿ, ಉತ್ತಮ ನಾಗರಿಕರಾಗಿ ಎಂದು ಕಿವಿಮಾತು ಹೇಳಿದರು.
ಉಪ ಪ್ರಾಚಾರ್ಯ ಸಿ.ಪಿ. ದೇವಿಋಷಿ ಹಾಗೂ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಸಮರ್ಥ ಮಡಿವಾಳ ಹಾಗೂ ಸಹಕಾರ್ಯದರ್ಶಿ ಅಂಜಲಿ ಲಮಾಣಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಶೃತಿ ನೀರಲಗಿಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಟಿ. ಪಿ. ಬಾನಕರೆ ಸ್ವಾಗತಿಸಿದರು. ದಿವ್ಯಾ ಪಾಲಭಾವಿ ಪರಿಚಯಿಸಿದರು. ಎಸ್. ಎನ್. ಮಡಿವಾಳರ ವರದಿ ವಾಚಿಸಿದರು. ಶ್ರೀದೇವಿ ಗುಮ್ಮಗೋಳ ವಂದಿಸಿದರು. ಶ್ರೀದೇವಿ ಗಂಗಾಪೂರ ಹಾಗೂ ಶಿಲ್ಪಾ ದೇವಲಾಪುರ ನಿರೂಪಿಸಿದರು. ವಿದ್ಯಾರ್ಥಿಗಳಾದ ಮೇಘ ಮಾನೆ, ಅಂಜಲಿ ಲಮಾಣಿ ಹಾಗೂ ಸಂಗಡಿಗರು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅಂಕಿತ ಪಾಟೀಲ, ಸುಷ್ಮಿತಾ ಸಜ್ಜನ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ವಿದ್ಯಾ ಬಡಿಗೇರ ಅಂಕಿತ ಸಾಗರ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


Share It

You cannot copy content of this page