ಬೆಂಗಳೂರು: ರಾಮಲಿಂಗಾ ರೆಡ್ಡಿ ಅವರು ಸಚಿವರಾಗಿದ್ದಾಗ ಮುಜರಾಯಿ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದು, ಮತ್ತಷ್ಟು ಬದಲಾವಣೆಯ ಆಲೋಚನೆಯನ್ನಿಟ್ಟುಕೊಂಡಿದ್ದರು. ಹೀಗಾಗಿ, ಈ ಬಾರಿಯೂ ಮುಜರಾಯಿ ಇಲಾಖೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ಕೊಡಿ ಎಂದು ಅರ್ಚಕರ ನಿಯೋಗ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಅರ್ಚಕರ ನಿಯೋಗ ರಾಮಲಿಂಗಾ ರೆಡ್ಡಿ ಅವರು, ಧಾರ್ಮಿಕ ಸೌಧಕ್ಕೆ ಅಡಿಗಲ್ಲು ಹಾಕಿದ್ದಾರೆ. ಅರ್ಚಕರ ವೇತನ ಹೆಚ್ಚಳ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮುಂದೆ ಅವರಿಂದ ಮತ್ತಷ್ಟು ಹೊಸ ಹೊಸ ಯೋಜನೆಗಳ ನಿರೀಕ್ಷೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ ಇದ್ದಾರೆ ಎಂದು ಮನವಿ ಮನವರಿಕೆ ಮಾಡಿಕೊಟ್ಟರು.
ಪ್ರಮುಖ ದೇವಾಲಯಗಳ ಅಭಿವೃದ್ಧಿಗೆ ಅವರು ಮಾಡಿರುವ ಮಾಸ್ಟರ್ ಪ್ಲಾನ್, ವಿವಿಧ ರಾಜ್ಯಗಳಲ್ಲಿರುವ ದೇವಸ್ಥಾನಗಳ ಛತ್ರಗಳ ಅಭಿವೃದ್ಧಿ, ಅಲ್ಲಿನ ವ್ಯವಸ್ಥೆಗಳನ್ನು ಸುಧಾರಣೆ ಮಾಡಲು ಅವರು ಆರಂಭಿಸಿದ ಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಸಚಿವರಾಗಿದ್ದಾಗ ಅರ್ಚಕರು ಅತ್ಯುತ್ತಮವಾದ ಸೇವೆಯನ್ನು ಪಡೆದಿದ್ದೇವೆ. ಹೀಗಾಗಿ ಅವರನ್ನೇ ಮುಂದುವರಿಸಿದರೆ ಒಳ್ಳೆಯದು ಎಂದು ಮನವಿ ಮಾಡಿದರು.
ಅರ್ಚಕರ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಶಿವಕುಮಾರ್ ಅವರು, ಹೈಕಮಾಂಡ್ ಜತೆಗೆ ಮುಂದಿನ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯುತ್ತಿದೆ. ಸಂಪುಟ ವಿಸ್ತರಣೆಯ ನಂತರ ಖಾತೆ ಹಂಚಿಕೆ ಮಾಡುವಾಗ ವರಿಷ್ಠರ ತೀರ್ಮಾನದಂತೆ ಕ್ರಮ ತೆಗೆದುಕೊಳ್ಳುತ್ತೇನೆ. ಒಳ್ಳೆಯ ಕೆಲಸ ಮಾಡುವವರಿಗೆ ಆಯಾ ಖಾತೆ ಕೊಡಬೇಕು ಎಂಬುದೇ ನಮ್ಮ ಆಶಯ. ಈ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು ಎನ್ನಲಾಗಿದೆ.

