ಸುಳ್ಳು ಬಿಜೆಪಿಯ ಪ್ರಬಲ ಅಸ್ತ್ರ: ಡಿಸಿಎಂ ಡಿ.ಕೆ. ಶಿವಕುಮಾರ್

Share It

:

ಬೆಂಗಳೂರು: “ಚುನಾವಣೆಗಳಲ್ಲಿ ಸುಳ್ಳೇ ಬಿಜೆಪಿಯ ಪ್ರಬಲ ಅಸ್ತ್ರವಾಗಿದೆ. ಹೀಗಾಗಿ ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವವರು ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಶಿವಕುಮಾರ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.

ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ವಸೂಲಿ ಮಾಡಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರೋಪದ ಬಗ್ಗೆ ಕೇಳಿದಾಗ, “ಪ್ರಧಾನಮಂತ್ರಿಗಳು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಅವರು ಈ ಆರೋಪಗಳನ್ನು ಸಾಬೀತುಪಡಿಸಲಿ. ನಾವು ಯಾವುದೇ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ.

ಕೇಂದ್ರ ಸಚಿವರುಗಳು ಯಾವ ಯಾವ ಚುನಾವಣೆಗೆ ಎಷ್ಟೆಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಉನ್ನತ ಹುದ್ದೆಯಲ್ಲಿರುವವರು ಆಧಾರವಿಲ್ಲದೆ ಆರೋಪ ಮಾಡಬಾರದು.

ಮಹಾರಾಷ್ಟ್ರ ಕಾಂಗ್ರೆಸ್ ನವರು ಈ ಬಗ್ಗೆ ನಮ್ಮ ಜತೆ ಚರ್ಚೆಯನ್ನೇ ಮಾಡಿಲ್ಲ. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ನಾಯಕರು ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಸುಳ್ಳು ಆರೋಪ ಮಾಡುತ್ತಿರುವ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಆಹ್ವಾನ ನೀಡುತ್ತಿದ್ದು, ಅವರಿಗಾಗಿ 30 ವಿಶೇಷ ಬಸ್ ಹಾಗೂ ವಿಮಾನ ಪ್ರಯಾಣ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮ ರಾಜ್ಯದ 30 ಜಿಲ್ಲೆಗಳಿಗೂ ಭೇಟಿ ನೀಡಿ, ನಮ್ಮ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ದೂರವಾಣಿ ಸಂಖ್ಯೆಗಳನ್ನು ಒದಗಿಸಿ ಪತ್ರ ಬರೆಯುತ್ತಿದ್ದೇನೆ” ಎಂದು ತಿಳಿಸಿದರು.

ಬಿಜೆಪಿಗೆ ಭಯ ಶುರುವಾಗಿದೆ:

ಮೋದಿ ಅವರು ಪದೇ ಪದೇ ಕರ್ನಾಟಕದ ಪ್ರಸ್ತಾಪ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಇದರಿಂದ ಏನೂ ಆಗುವುದಿಲ್ಲ. ಜನ ಈಗಾಗಲೇ ಅವರಿಗೆ ಉತ್ತರ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ತನ್ನ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ ಎಂಬ ಭಯ ಶುರುವಾಗಿದೆ” ಎಂದು ತಿಳಿಸಿದರು.

ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ:

ಸಚಿವರ ಮೇಲೆ ಹಲ್ಲೆಯಾಗಿದೆಯೇ ಎಂದು ಕೇಳಿದಾಗ, “ಈ ರೀತಿ ಏನೂ ಆಗಿಲ್ಲ. ಎಲ್ಲವೂ ಸುಳ್ಳು. ಈ ರೀತಿ ಹೇಳಿದವರಿಗೂ ಮೋಸ ಮಾಡಿದ್ದಾರೆ ಎಂದು ಯಾರೋ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಹೇಳಿದರು. ಇದಕ್ಕೆಲ್ಲಾ ಆಧಾರ ಇದೆಯೇ? ಇಂತಹ ಆಧಾರ ರಹಿತ ಹೇಳಿಕೆ ನೀಡಲು ನಾನು ತಯಾರಿಲ್ಲ. ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ” ಎಂದು ತಿರುಗೇಟು ನೀಡಿದರು.


Share It

You May Have Missed

You cannot copy content of this page