ಚಳಿಗಾಲ ಆರಂಭ: ಅಯೋಧ್ಯೆ ಬಾಲರಾಮನ ಬೆಚ್ಚಗಿಡಲು ಉಲ್ಲನ್ ಬಟ್ಟೆ, ಪಶ್ನಿನಾ ಶಾಲು, ಡ್ರೈ ಫ್ರೂಟ್ಸ್ ನೈವೇದ್ಯ
ಅಯೋಧ್ಯೆ: ದೇಶದ ಪ್ರಸಿದ್ಧ ದೇವಸ್ಥಾನವಾದ ಆಯೋಧ್ಯೆಯಲ್ಲಿ ಬಾಲರಾಮನನ್ನು ಚಳಿಗಾಲದಲ್ಲಿ ಬೆಚ್ಚಗಿಡಲು ಆಡಳಿತ ಮಂಡಳಿ ಹೊಸದೊಂದು ಯೋಜನೆಯನ್ನು ರೂಪಿಸಿದೆ.
ಅತಿಯಾದ ಚಳಿಯ ಕಾರಣಕ್ಕೆ ಬಾಲ ರಾಮನ ಮೂರ್ತಿಗೆ ಪಶ್ಮಿನಾ ಶಾಲು ಮತ್ತು ಉಲ್ಲನ್ ಬಟ್ಟೆಗಳನ್ನು ತೊಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಅದೇ ರೀತಿ ದೇವರಿಗೆ ನೀಡುವ ನೈವೇದ್ಯದಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನು ತರಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ನವೆಂಬರ್20 ರಿಂದ ಅಘನಿ ಕೀ ಪಂಚಮಿ ಆರಂಭವಾಗಲಿದ್ದು ಅಂದಿನಿಂದ ಶ್ರೀರಾಮನ ಮೂರ್ತಿಯನ್ನು ಗಾದಿಗಳು ಪಶ್ಮಿನಾ ಶಾಲು ಹಾಗೂ ಇನ್ನಿತರ ಉಲ್ಲನ್ ಬಟ್ಟೆಗಳಿಂದ ಸುತ್ತಲಾಗುತ್ತದೆ. ಇದಕ್ಕಾಗಿ ದೆಹಲಿ ಪ್ರಖ್ಯಾತ ವಸ್ತ್ರವಿನ್ಯಾಸಕಾರರೊಬ್ಬರು ಈಗಾಗಲೇ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ.
ನ.20 ರಿಂದ ಮೂರ್ತಿಗೆ ಉಗುರು ಬೆಚ್ಚಗಿನ ಸ್ನಾನ ಮಾಡಿಸುವುದು, ಗರ್ಭಗುಡಿಗೆ ಹೀಟರ್ ಗಳನ್ನು ಅಳವಡಿಸಿ ಬೆಚ್ಚಗಿಡುವಂತೆ ಮಾಡುವುದು, ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಬ್ಲೋಬರ್ ನಿಂದ ಬಿಸಿ ಗಾಳಿಯನ್ನು ಗರ್ಭಗುಡಿಯಲ್ಲಿ ಹರಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಶ್ರೀರಾಮನ ಮೂರ್ತಿ ಬಾಲ ರಾಮನಾಗಿದ್ದು, ಮಗುವಿನಂತೆಯೇ ಹಾರೈಕೆ ಮಾಡಲಾಗುತ್ತದೆ. ನಿತ್ಯದ ಆಹಾರವಾಗಿ ಮೊಸರು ಮತ್ತು ಡ್ರೈ ಫ್ರೂಟ್ಸ್ ಗಳನ್ನು ಕೊಡಲಾಗುತ್ತದೆ. ಚಳಿಗಾಲದಲ್ಲಿ ಸೂಕ್ತ ಎನಿಸುವ ಆಹಾರವನ್ನು ವಿಗ್ರಹಕ್ಕೆ ನೈವೇದ್ಯವಾಗಿ ಇಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.