ಶಾಲಾ-ಕಾಲೇಜುಗಳಿಗೆ ಎರಡನೇ ಶನಿವಾರ ಕಡ್ಡಾಯ ರಜೆ ಘೋಷಣೆ !
ಬೆಂಗಳೂರು: ಎರಡನೇ ಶನಿವಾರವೂ ಖಾಸಗಿ ಮತ್ತು ಸರಕಾರಿ ಶಾಲಾ ಕಾಲೇಜುಗಳಿಗೆ ಕಡ್ಡಾಯ ರಜೆ ನೀಡಲು ಹರಿಯಾಣ ಸರಕಾರ ತೀರ್ಮಾನಿಸಿದೆ.
ಈ ಸಂಬಂಧ ನವೆಂಬರ್ 9 ರಂದು ಸುತ್ತೋಲೆ ಹೊರಡಿಸಿದ್ದು, ಸಾಮಾನ್ಯ ರಜೆ ದಿನಗಳ ಜತೆಗೆ ಎರಡನೇ ಶನಿವಾರವನ್ನು ಶಾಲಾ ಕಾಲೇಜುಗಳ ಕಡ್ಡಾಯ ರಜೆ ಎಂದು ಘೋಷಣೆ ಮಾಡಬೇಕು ಎಂದು ಹೇಳಲಾಗಿದೆ. ಇದರಿಂದ ಮಕ್ಕಳ ಮೇಲಿನ ಹೊರೆ ತಗ್ಗಿಸುವುದು ಗುರಿ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಎರಡನೇ ಶನಿವಾರ ಬ್ಯಾಂಕಿಂಗ್ ಮತ್ತಿತರ ಹಣಕಾಸು ವ್ಯವಹಾರಗಳಿಗೆ ಮಾತ್ರವೇ ರಜೆ ನೀಡಲಾಗುತ್ತಿದೆ. ಆದರೆ, ಹರಿಯಾಣ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ, ಎರಡನೇ ಶನಿವಾರವೂ ರಜೆ ನೀಡಲು ತೀರ್ಮಾನಿಸಿದೆ. ಅಂದು ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಸದಂತೆ ಸೂಚನೆ ನೀಡಿದೆ.
ರಜೆ ನೀಡುವ ಬಗ್ಗೆ ಮೇಲ್ವಿಚಾರಣೆ ನಡೆಸಲು ಆಯಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ರಜೆ ನೀಡದ ಶಾಲೆ ಮತ್ತು ಕಾಲೇಜುಗಳ ವಿರುದ್ಧ ಸೂಕ್ತ ಕ್ರಮಕ್ಕೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ. ರಜೆ ನೀಡದ ಶಾಲೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಕ್ರಮ ವಹಿಸಲು ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದೆ.