ರಾಜಕೀಯ ಸುದ್ದಿ

ಕೊಟ್ಟ ಮಾತು ಉಳಿಸಿಕೊಳ್ಳಿ ಸಿಎಂ: ರಾಮಲಿಂಗಾ ರೆಡ್ಡಿ ಪರ ಕಾರ್ಯಕರ್ತರ ಟ್ವಿಟ್ಟರ್ ಅಭಿಯಾನ

Share It

ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ಉಸ್ತುವಾರಿ ಖಾತೆ ನೀಡುತ್ತೇನೆ ಎಂದು ತಾವು ಮೂರು ವರ್ಷದ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಸಿಎಂ ಡಿ ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆಗೆ ರಾಮಲಿಂಗಾ ರೆಡ್ಡಿ ಅವರಂತಹ ನಾಯಕ ಬೇಕೇಬೇಕು. ಹೀಗಿರುವಾಗ ಅವರನ್ನು ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನದಿಂದ ದೂರ ಇಟ್ಟಿರುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

2023 ರಲ್ಲಿ ರಾಜೀನಾಮೆಗೆ ಮುಂದಾಗಿದ್ದ ರಾಮಲಿಂಗ ರೆಡ್ಡಿ ಅವರ ಮನೆಗೆ ಆಗಮಿಸಿದ್ದ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್, ಮುಂದಿನ ದಿನಗಳಲ್ಲಿ ಅಂದರೆ ನಾನು ಸಿಎಂ ಆದಾಗ ನಿಮ್ಮನ್ನು ಬೆಂಗಳೂರು ಉಸ್ತುವಾರಿ ಮಾಡ್ತೇನೆ. ಅಲ್ಲೀವರೆಗೆ ನೀವು ಸಾರಿಗೆ ಖಾತೆ ನಿಭಾಯಿಸಿ ಎಂದು ಮನವಿ ಮಾಡಿಕೊಂಡಿದ್ದರು. ಡಿಕೆ ಸಹೋದರರ ಮೇಲಿನ ವಿಶ್ವಾಸಕ್ಕೆ ಮಣಿದು ರಾಮಲಿಂಗ ರೆಡ್ಡಿ ತಮ್ಮ ನಿರ್ಧಾರ ವಾಪಸ್ ತೆಗೆದುಕೊಂಡಿದ್ದರು.

ಅದರೆ, ಇದೀಗ ಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರು ತಮ್ಮ ಮಾತು ಮರೆತಿದ್ದಾರೆ. ಬೆಂಗಳೂರು ಖಾತೆ ಕೊಡಲು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಬೆಂಗಳೂರು ಅಭಿವೃದ್ಧಿ ಮತ್ತು ಮುಂಬರುವ ಜಿಬಿಎ ಚುನಾವಣೆಯ ದೃಷ್ಟಿಯಿಂದ ರಾಮಲಿಂಗ ರೆಡ್ಡಿ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಈ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹೈಕಮಾಂಡ್ ಗಮನ ನೀಡಬೇಕು. ಇಂತಹ ಘಟನೆಯನ್ನು ಸಹಿಸಿಕೊಂಡು ಸುಮ್ಮನಾದರೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಬಹಳ ಕಷ್ಟವಾಗುತ್ತಿದೆ. ಪಕ್ಷ ಜಿಬಿಎ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಕೆಲವರು ರಾಹುಲ್ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದು, ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.


Share It

You cannot copy content of this page