ಅಪರಾಧ ಕ್ರೀಡೆ ಸುದ್ದಿ

ಕ್ರಿಕೆಟರ್ ಅಭಿಷೇಕ್ ಪೊರೆಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಬಂಧನಕ್ಕೆ ಕೋರ್ಟ್ ಆದೇಶ

Share It

ಕೋಲ್ಕತ್ತಾ: ವೈದ್ಯಕೀಯ ವಿದ್ಯಾರ್ಥಿನಿ ದಾಖಲಿಸಿರುವ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪ ಪ್ರಕರಣದಲ್ಲಿ ಭಾರತ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್‌ ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಮತ್ತು ಮತ್ತೊಬ್ಬ ಆರೋಪಿ ಬಂಧನಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. 

ಸಿವಾರನೆ ನಡೆಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ, ಸಂತ್ರಸ್ತೆಯ ಖಾಸಗಿ ಫೊಟೋಗಳು ಮತ್ತಷ್ಟು ಪ್ರಸಾರವಾಗುವುದನ್ನು ತಡೆಯುವ ಉದ್ದೇಶದಿಂದ ಅಭಿಷೇಕ್ ಪೊರೆಲ್ ಅವರನ್ನು ತಕ್ಷಣ ಬಂಧಿಸಿ, ಅವರ ಬಳಿಯಿರುವ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳುವಂತೆ ಮೊಗ್ರಾ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. 

ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಪರ ಯಾವುದೇ ವಕೀಲರು ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ದೂರುದಾರರ ಪರ ವಕೀಲ ರಾಂದೇವ್ ಸೇನ್‌ಗುಪ್ತಾ ಮತ್ತು ಆಕಾಶ್ ಗಂಗೋಪಾಧ್ಯಾಯ ಅವರು, ಆರೋಪಿಗಳ ಎಲೆಕ್ಟ್ರಾನಿಕ್ ಸಾಧನಗಳನ್ನು ತಕ್ಷಣ ವಶಪಡಿಸಿಕೊಳ್ಳದಿದ್ದರೆ ಸಂತ್ರಸ್ತೆಯ ಖಾಸಗಿ ಫೊಟೋಗಳು ಮತ್ತಷ್ಟು ಪ್ರಸಾರವಾಗುವ ಗಂಭೀರ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

ಅಲ್ಲದೆ, ಪೊರೆಲ್ ಇದೇ ರೀತಿಯಲ್ಲಿ ಹಲವು ಯುವತಿಯರೊಂದಿಗೆ ಪ್ರಣಯ ಸಂಬಂಧ ಬೆಳೆಸಿ, ಅವರ ಖಾಸಗಿ ಫೊಟೋ ಪಡೆದು ಬಳಿಕ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪಗಳೂ ಇವೆ ಎಂದು ವಾದಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಪ್ರಾಥಮಿಕ ಪುರಾವೆಗಳನ್ನು ದೂರುದಾರರ ಪರ ನ್ಯಾಯಾಲಯದ ಮುಂದೆ ಮಂಡಿಸಲಾಯಿತು. ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ವರದಿಯನ್ನು ಆಗಸ್ಟ್ 11ರೊಳಗೆ ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ. 

23 ವರ್ಷದ ಮಹಿಳೆ ಹಾಗೂ ಆಕೆಯ ತಾಯಿ ಮೊಗ್ರಾ ಪೊಲೀಸ್ ಠಾಣೆಯಲ್ಲಿ ಜಂಟಿಯಾಗಿ ದೂರು ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದು, ಬಳಿಕ ಆ ಭರವಸೆಯಿಂದ ಹಿಂದೆ ಸರಿದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ತನ್ನ ಮೇಲೆ ಹಲ್ಲೆ ನಡೆಸಿ ಕ್ರಿಮಿನಲ್ ಬೆದರಿಕೆ ಹಾಕಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರುದಾರೆ ಪ್ರಕಾರ, ತಾನು ಮತ್ತು ಅಭಿಷೇಕ್ ಪೊರೆಲ್ ಕಳೆದ ಮೂರು ವರ್ಷಗಳಿಂದ ಪ್ರಣಯ ಸಂಬಂಧದಲ್ಲಿದ್ದರು. ಕಳೆದ ವರ್ಷದಿಂದ ಪೊರೆಲ್ ತನ್ನಿಂದ ದೂರವಾಗಲು ಆರಂಭಿಸಿದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಪ್ರಕರಣದ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಅಭಿಷೇಕ್ ಪೊರೆಲ್, “ನಾನು ಈಗ ಚೆನ್ನಾಗಿ ಆಡುತ್ತಿದ್ದೇನೆ. ಆದ್ದರಿಂದ ನನ್ನ ಬಗ್ಗೆ ವಿವಿಧ ರೀತಿಯ ವಿಷಯಗಳು ಹೊರಬರುತ್ತಿವೆ. ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಈವರೆಗೆ ನಾನು ಪೊಲೀಸರೊಂದಿಗೆ ಮಾತನಾಡಿಲ್ಲ” ಎಂದು ಹೇಳಿದ್ದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 11ರಂದು ನಡೆಯಲಿದೆ


Share It

You cannot copy content of this page