ರಸ್ತೆಗಿಳಿಯಲಿವೆ ಅಶ್ವಮೇದ ಎಸಿ ಬಸ್ : ರಾಜಧಾನಿಯಿಂದ 100 ಕಿ.ಮೀ ಸಂಚಾರ
ಬೆಂಗಳೂರು: ರಾಜದಾನಿ ಬೆಂಗಳೂರಿನಿಂದ ನಿತ್ಯ ಸಂಚಾರ ನಡೆಸುವವರ ಅನುಕೂಲಕ್ಕಾಗಿ ಅಶ್ವಮೇಧ ಬಸ್ ಗಳನ್ನು ಎಸಿ ಬಸ್ ಗಳಾಗಿ ಮೇಲ್ದರ್ಜೆಗೇರಿಸಲು KSRTC ತೀರ್ಮಾನಿಸಿದೆ.
ಗ್ಯಾರಂಟಿ ಯೋಜನೆಯ ಪರಿಣಾಮ ಸಾಮಾನ್ಯ ಬಸ್ ಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ಕೆಲಸದ ನಿಮಿತ್ತ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಸಾಧ್ಯವಾಗುತ್ತಿಲ್ಲ ಎಂಬ ದೂರಿದೆ. ಇದನ್ನು ಪರಿಹರಿಸಲು ಅಶ್ವಮೇಧ- ಎಸಿ ಬಸ್ ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ.
ಅಶ್ವಮೇಧ ಎಸಿ ಬಸ್ ಗಳು ಸಾಮಾನ್ಯ ಬಸ್ ಗಳಿಗಿಂತ ಚಿಕ್ಕದಾಗಿರಲಿದ್ದು, ಹವಾನಿಯಂತ್ರಿತ ವ್ಯವಸ್ಥೆ, ಚಾರ್ಜರ್ ಪಾಯಿಂಟ್ ಒಳಗೊಂಡಿರಲಿವೆ. ಇದರಿಂದಾಗಿ ನಿತ್ಯ ಕೆಲಸಕ್ಕಾಗಿ ಬೆಂಗಳೂರಿನಿಂದ ಹತ್ತಿರದ ನಗರಗಳಿಗೆ ಪ್ರಯಾಣ ಮಾಡಿವವರಿಗೆ ಅನುಕೂಲವಾಗಲಿದೆ.
ಬೆಂಗಳೂರಿನಿಂದ 100 ಕಿ.ಮೀ ದೂರಕ್ಕಿಂತ ಕಡಿಮೆಯಿರುವ ನಗರಗಳಾದ ಚನ್ನಪಟ್ಟಣ, ರಾಮನಗರ, ಕೋಲಾರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಹೊಸೂರು ನಗರಗಳ ನಡುವೆ ಅಶ್ವಮೇಧ ಎಸಿ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ.
ಸಾಮಾನ್ಯ ಬಸ್ ಗಳಲ್ಲಿ ಆಗುವ ಕಿರಿಕಿರಿ ತಪ್ಪಿಸಿ, ಕೆಲಸ ಮುಗಿಸಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ಗಳನ್ನು ವಿನ್ಯಾಸ ಮಾಡಲು ತೀರ್ಮಾನಿಸಲಾಗಿದೆ. ಪಾಯಿಂಟ್ ಟು ಪಾಯಿಂಟ್ ಕಾರ್ಯಾಚರಣೆ ನಡೆಸಲಿವೆ.
ದರ ತುಸು ದುಬಾರಿ: ಸಾಮಾನ್ಯ ಅಶ್ವಮೇಧ ಬಸ್ ಗಳಿಗಿಂತ ಅಶ್ವಮೇಧ ಎಸಿ ಬಸ್ ಗಳಲ್ಲಿ ದರ ಸ್ವಲ್ಪ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಪ್ರಯಾಣಿಕರಿಗೆ ಹೆಚ್ಚಿನ ಆರಾಮಾದಾಯಕ ಅನುಭವ ಕೊಡುವುದು ಮತ್ತು ಹೆಚ್ಚಿನ ವ್ಯವಸ್ಥೆ ಕಲಪಿಸುವುದು ಸಂಸ್ಥೆಯ ಉದ್ದೇಶವಾಗಿರಲಿದೆ.
ಮಾಸ್ಟರ್ ಪ್ಲ್ಯಾನ್ ರೆಡಿ: ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 100 ಕಿ.ಮೀ ನೊಳಗೆ ಎಸಿ ಬಸ್ ಗಳನ್ನು ಓಡಿಸಲು ಕಾರ್ಯಾಯೋಜನೆ ರೂಪಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲು ಸಂಸ್ಥೆ ಸಿದ್ಧತೆ ನಡೆಸಿದೆ. ಮಾರ್ಗಗಳ ಅಧ್ಯಯನ, ದರಗಳ ನಿಗದಿ, ಪ್ರಯಾಣಿಕರ ಅಭಿಪ್ರಾಯ ಸಂಗ್ರಹ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.