ಅಂಕಣ ಸುದ್ದಿ

ನೆಗಡಿಯಾಗಿದೆ ಎಂದು ಮೂಗು ಕತ್ತರಿಸಲು ಸಾಧ್ಯವಿಲ್ಲ; ಒಬ್ಬರ ತಪ್ಪಿಗೆ ಇಡೀ ಪರಿಷತ್‌ಗೆ ಕೆಟ್ಟಹೆಸರು ತರವಲ್ಲ

Share It

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸದನದಲ್ಲಿಯೇ ಸಚಿವೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ವಿವಾದದ ನಡುವೆ ರಾಜ್ಯದಲ್ಲಿ ಚಿಂತಕರ ಚಾವಡಿ ಎನಿಸಿಕೊಂಡಿದ್ದ ವಿಧಾನ ಪರಿಷತ್‌ನ ಘನತೆ ಕುಗ್ಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಮಾತನಾಡಿರುವ ಮಾಜಿ ವಿಧಾನ ಪರಿಷತ್ ಸದಸ್ಯರೂ, ಹಿರಿಯ ಸಂಸದೀಯ ಪಟುವೂ ಆದ ಪಿ.ಆರ್.ರಮೇಶ್ ವೈಟ್ ಪೇಪರ್ ಜತೆಗೆ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಿ.ಟಿ.ರವಿ ವಿವಾದದಿಂದ ಪರಿಷತ್‌ಗೆ ಕೆಟ್ಟ ಹೆಸರು ಬಂದಿದೆಯೇ?
ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿ ಮಾಡಿದ ತಪ್ಪಿನಿಂದ ಇಡೀ ಸದನಕ್ಕೆ ಕೆಟ್ಟ ಹೆಸರು ಬರುವುದಿಲ್ಲ. ಸಿ.ಟಿ.ರವಿ ಇಂತಹ ಪದವನ್ನು ಬಳಕೆ ಮಾಡಿದ್ದಾರೆಯೋ ಅಥವಾ ಇಲ್ಲವೋ ಎಂಬ ಕುರಿತು ತನಿಖೆ ನಡೆಯಲಿ, ಸತ್ಯ ಏನೆಂಬುದು ಹೊರಗೆ ಬರಲಿ, ಆದರೆ, ಕೆಲ ಸದಸ್ಯರು ಮಾತನಾಡುವ ಮಾತಿನಿಂದ, ನಡವಳಿಕೆಯಿಂದ ಇಡೀ ಸದನದ ಘನತೆ ಕಡಿಮೆಯಾಗುವುದಿಲ್ಲ.

ವಿಧಾನ ಪರಿಷತ್‌ನಲ್ಲಿ ಇಂತಹ ನಡವಳಿಕೆ ನಿಮಗೆ ಸಹ್ಯವೆನಿಸುತ್ತದೆಯೇ?
ವಿಧಾನ ಪರಿಷತ್ ಗೆ ತನ್ನದೇ ಆದ ಘಟನೆಯಿದೆ. ಇಲ್ಲಿ ಮಾತನಾಡುವಾಗ ವಿಧಾನಸಭೆಗಿಂತಲೂ ಒಂದು ತೂಕ ಹೆಚ್ಚಿಗೆ ಪ್ರಜ್ಞಾಪೂರ್ವಕವಾಗಿ ಮಾತನಾಡಬೇಕು. ಒಂದು ವೇಳೆ ಸಿ.ಟಿ.ರವಿ ಇಂತಹ ಮಾತುಗಳನ್ನು ಆಡಿದ್ದೇ ಆಗಿದ್ದರೆ ಅದು ತಪ್ಪು. ಈ ಸರಿ ಮತ್ತು ತಪ್ಪು ನಿರ್ಧಾರ ಮಾಡುವುದು ಸಭಾಪತಿಗಳು ಹಾಗೂ ಇದಕ್ಕೆ ಸಂಬAಧಿಸಿದ ತನಿಖಾ ವ್ಯವಸ್ಥೆಯೇ ಹೊರತು, ಮತ್ಯಾರೋ ಅದರ ಕುರಿತು ಅಂತಿಮ ತೀರ್ಮಾನ ನೀಡಲು ಸಾಧ್ಯವಿಲ್ಲ.

ಇಂತಹ ಘಟನೆಗಳಿಗೆ ಕಡಿವಾಣ ಹಾಕುವುದು ಹೇಗೆ?
ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಾಗ ಎಲ್ಲ ರಾಜಕೀಯ ಪಕ್ಷಗಳು ಎಚ್ಚರಿಕೆಯ ನಡೆ ಅನುಸರಿಸಬೇಕು. ಇದು ಚಿಂತಕರ ಚಾವಡಿ ಎನಿಸಿಕೊಂಡ ಸದನ. ಹೀಗಾಗಿ, ಯೋಗ್ಯರಾದ, ಚಿಂತನಾಶೀಲ ವ್ಯಕ್ತಿಗಳನ್ನು ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡಬೇಕು. ಆಗ ಮಾತ್ರ ಚಿಂತಕರ ಚಾವಡಿ ಎಂಬ ಈ ಅನ್ವರ್ಥ ನಾಮಕ್ಕೆ ಅರ್ಥ ಬರುತ್ತದೆ. ಇಲ್ಲವಾದಲ್ಲಿ, ಉದ್ಯಮಿಗಳು, ವಿಧಾನಸಭೆಗೆ ಟಿಕೆಟ್ ವಂಚಿತರು ವಿಧಾನ ಪರಿಷತ್ತಿಗೆ ಬಂದು, ಸದನದ ಘನತೆಗೆ ವಿರುದ್ಧ ನಡೆದುಕೊಂಡು ಮೌಲ್ಯ ಹಾಳು ಮಾಡುತ್ತಾರೆ.

ಇಂತಹ ಘಟನೆಗಳ ಬಗ್ಗೆ ಕಿರಿಯ ಸದಸ್ಯರಿಗೆ ನಿಮ್ಮ ಕಿವಿಮಾತೇನು?
ವಿಧಾನ ಪರಿಷತ್ತು, ವಿಧಾನ ಸಭೆ ಯಾವುದೇ ಆಗಲೀ, ಒಂದು ಮಹಿಳೆಯ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕಿತ್ತು. ಈ ಪ್ರಕರಣದಿಂದಾದರೂ ಕಿರಿಯ ಸದಸ್ಯರು ಎಚ್ಚೆತ್ತುಕೊಳ್ಳಬೇಕು. ಮುಂದೆ ಸದನದಲ್ಲಿ ತಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು. ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಪ್ರತಿನಿಧಿಗಳ ಮೇಲೆ ಇಡೀ ರಾಜ್ಯದ ರಾಜಕೀಯ ಗೌರವ ಕಾಪಾಡುವ ಜವಾಬ್ದಾರಿಯಿದ್ದು, ಅದನ್ನು ಅರಿತು ನಡೆಯುವಂತೆ ಸಲಹೆ ನೀಡುತ್ತೇನೆ.

ಇಂತಹ ಘಟನೆಯಿಂದ ವಿಧಾನ ಪರಿಷತ್ ಅವಶ್ಯಕತೆ ಇದೆಯೇ ಎಂಬೊAದು ಚರ್ಚೆ ಶುರುವಾಗಿದೆಯಲ್ಲ?
ವಿಧಾನ ಸಭೆಯಲ್ಲಿ ರೂಪಿಸಿದ ಕಾಯಿದೆಗಳು ಹೆಚ್ಚಾಗಿ ಚರ್ಚೆಗೆ ಒಳಪಡುವುದೇ ವಿಧಾನ ಪರಿಷತ್ತಿನಲ್ಲಿ. ಕರ್ನಾಟಕದ ವಿಧಾನ ಪರಿಷತ್ತು, ಸಂವಿಧಾನ ಜಾರಿಗೆ ಬರುವ ಮೊದಲೇ ಜಾರಿಯಲ್ಲಿದ್ದ ಸಂವಿಧಾನಿಕ ವ್ಯವಸ್ಥೆ. ಇದು ಮೈಸೂರು ಮಹಾರಾಜರು ದೇಶದ ಆಡಳಿತ ವ್ಯವಸ್ಥೆಗೆ ನೀಡಿದ ಕೊಡುಗೆ. ಯಾವುದೋ ಒಂದು ಘಟನೆಯಿಂದ ವಿಧಾನ ಪರಿಷತ್ ಅಸ್ತಿತ್ವವನ್ನೇ ಪ್ರಶ್ನಿಸುವುದು ಸರಿಯಾದ ನಡೆಯಲ್ಲ. ಅದರ ಬದಲು ಅಲ್ಲಿಗೆ ಬರುವ ಪ್ರತಿನಿಧಿಗಳ ಆಯ್ಕೆಯಲ್ಲಿ ಎಲ್ಲ ಪಕ್ಷಗಳು ಜಾಗೃತಿ ವಹಿಸಬೇಕು. ಆಗ ಇಂತಹ ಘಟನೆಗಳು ನಡೆಯುವುದಿಲ್ಲ.


Share It

You cannot copy content of this page