ಸುದ್ದಿ

ವಿವಿ ಪ್ಯಾಟ್ ಚೀಟಿ ಎಣಿಕೆಗೆ ಕೋರಿಕೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Share It

ನವದೆಹಲಿ, ಏಪ್ರಿಲ್ 26: ಇವಿಎಂ ಮೆಷೀನ್​ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರು ಈ ಆದೇಶ ನೀಡಿದ್ದಾರೆ. ಏಪ್ರಿಲ್ 18ರಂದು ಸುಪ್ರೀಂ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಮೊನ್ನೆ (ಏಪ್ರಿಲ್ 24) ಚುನಾವಣಾ ಆಯೋಗದಿಂದ ಕೆಲ ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯಲು ವಿಚಾರಣೆ ನಡೆಸಿತ್ತು. ಇದೀಗ ನ್ಯಾಯಪೀಠ ತನ್ನ ತೀರ್ಪು ನೀಡಿದ್ದು, ಇವಿಎಂ ಮತ್ತು ವಿವಿಪ್ಯಾಟ್ ಪೂರ್ಣ ತಾಳೆಯಾಗಬೇಕೆನ್ನುವ ಮನವಿಯನ್ನು ತಿರಸ್ಕರಿಸಲು ನಿರ್ಧರಿಸಿದೆ.

‘ವಿವಿಧ ದೃಷ್ಟಿಕೋನ ಇರಬೇಕೆನ್ನುವುದು ಮುಖ್ಯ ಹೌದು. ಆದರೆ, ಒಂದು ವ್ಯವಸ್ಥೆಯನ್ನು ಕುರುಡಾಗಿ ಅನುಮಾನಿಸುವುದು ತಪ್ಪಾಗುತ್ತದೆ. ನ್ಯಾಯಾಂಗವಾಗಲೀ, ಶಾಸಕಾಂಗವಾಗಲೀ ಅರ್ಥಗರ್ಭಿತ ಟೀಕೆಗಳು ಬೇಕಾಗುತ್ತದೆ. ಪ್ರಜಾತಂತ್ರದ ಎಲ್ಲಾ ಸ್ತಂಭಗಳ ನಡುವೆ ವಿಶ್ವಾಸ ಇರುವುದು ಅಗತ್ಯ. ಈ ರೀತಿ ನಂಬಿಕೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರಜಾತಂತ್ರದ ಧ್ವನಿಯನ್ನು ಬಲಪಡಿಸಬಹುದು,’ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಸಿಂಬಲ್ ಲೋಡಿಂಗ್ ಯೂನಿಟ್​ಗೆ ಸೀಲ್
ಸುಪ್ರೀಂಕೋರ್ಟ್​ನ ದ್ವಿಸದಸ್ಯ ನ್ಯಾಯಪೀಠ ಈ ವೇಳೆ ಎರಡು ಮಹತ್ವದ ನಿರ್ದೇಶನ ನೀಡಿದೆ. ಇವಿಎಂ ಮೆಷೀನ್​ಗಳಲ್ಲಿ ಚಿಹ್ನೆ ನಮೂದಾದ ಬಳಿಕ ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಬೇಕು. ಈ ಯೂನಿಟ್ ಅನ್ನು ಕನಿಷ್ಠ 45 ದಿನಗಳವರೆಗೆ ರಕ್ಷಿಸಿ ಇಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಫಲಿತಾಂಶ ಘೋಷಣೆ ಬಳಿಕ ಬರ್ನ್ಟ್ ಮೆಮೊರಿ ಪರಿಶೀಲನೆ
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ವಿವಿಪ್ಯಾಟ್ ಕ್ರಾಸ್ ವೆರಿಫಿಕೇಶನ್​ಗೆ ಮನವಿ ಮಾಡಿದರೆ ಇವಿಎಂ ಮೆಷೀನ್​ನಲ್ಲಿರುವ ಮೈಕ್ರೋಕಂಟ್ರೋಲ್​ನಲ್ಲಿನ ಬರ್ನ್ಟ್ ಮೆಮೊರಿಯನ್ನು ತಂತ್ರಜ್ಞರ ತಂಡವೊಂದು ಪರಿಶೀಲನೆ ನಡೆಸಲು ಅವಕಾಶ ಕೊಡಬೇಕು. ಇದರ ವೆಚ್ಚವನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ. ಒಂದು ವೇಳೆ ಇವಿಎಂ ತಿರುಚಲಾಗಿರುವುದು ಗೊತ್ತಾದರೆ ಅಭ್ಯರ್ಥಿಗೆ ಆ ಹಣ ರೀಫಂಡ್ ಮಾಡಬಹುದು ಎಂದೂ ಸುಪ್ರೀಂಕೋರ್ಟ್ ಸಲಹೆ ನೀಡಿದೆ.

ಈಗ ಹೇಗಿದೆ ಮತ ಎಣಿಕೆ ವ್ಯವಸ್ಥೆ?
ಇವಿಎಂನಲ್ಲಿ ಮತ ಹಾಕಿದಾಗ ವಿವಿಪ್ಯಾಟ್ ಸ್ಲಿಪ್ ಬರುವ ವ್ಯವಸ್ಥೆ ಇದೆ. ಆದರೆ, ವಿವಿಪ್ಯಾಟ್​ನಿಂದ ಬರುವ ಚೀಟಿಗಳನ್ನು ಪೂರ್ಣವಾಗಿ ಎಣಿಸಲಾಗುವುದಿಲ್ಲ. ಒಂದು ವಿಧಾನಸಭಾ ಕ್ಷೇತ್ರದ 5 ಆಯ್ದ ಎವಿಎಂಗಳನ್ನು ಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಿ ಕ್ರಾಸ್ ವೆರಿಫೈ ಮಾಡಲಾಗುತ್ತಿದೆ. ದೇಶಾದ್ಯಂತ ಎಲ್ಲಾ ಇವಿಎಂ ಮೆಷೀನ್​ಗಳಿಗೂ ಈ ಕ್ರಾಸ್ ವೆರಿಫಿಕೇಶನ್ ಆಗಬೇಕು ಎಂಬುದು ಅರ್ಜಿದಾರರ ಮನವಿಯಾಗಿತ್ತು. ಆದರೆ, ಈ ಕೋರಿಕೆಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿಲ್ಲ.


Share It

You cannot copy content of this page