ದೇವನಹಳ್ಳಿ:
ಸರ್ಕಾರ ಕೈಗಾರಿಕಾ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಮೂಲಕ ರೈತರಿಂದ ವಶಪಡಿಸಿಕೊಂಡಿರುವ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ದೇವನಹಳ್ಳಿ ತಾಲ್ಲೂಕ್ಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ನೂರಾರು ರೈತರು ಅನಿರ್ದಿಷ್ಟಾವಧಿ ಧರಣಿ ಕುಳಿತು ಎರಡು ವರ್ಷಗಳು ಕಳೆದಿದೆ,
ಮಳೆ ಗಾಳಿ ಬಿಸಿಲುಗಳನ್ನು ಲೆಕ್ಕಿಸದೆ ಕಳೆದ 740 ದಿನಗಳಿಂದ ಬೀದಿಯಲ್ಲಿ ಕುಳಿತು ತಮ್ಮ ಕೃಷಿ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವಂತೆ ಒತ್ತಾಯಿಸುತ್ತಿದ್ದರು ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸದದೆ ಕಳೆದ ಎರಡು ವರ್ಷಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ, ಧರಣಿ, ಜಾಥಗಳ ಮೂಲಕ ಸರ್ಕಾರಗಳ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರು ಸರ್ಕಾರಗಳು ಮಾತ್ರ ಕನಿಷ್ಠ ಸೌಜನ್ಯ, ಸಹಾನುಭೂತಿಯನ್ನು ತೋರದೆ ಮಂದ ಚರ್ಮದವರಂತೆ ವರ್ತಿಸುತ್ತಿವೆ, ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ರೈತರನ್ನು ಅಪಮಾನಿಸುತ್ತ ಬಂದಿವೆ, ಈ ಎಲ್ಲ ವಿಷಯಗಳ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ರೂಪಿಸುವ ನಿಟ್ಟಿನಲ್ಲಿ ದಿನಾಂಕ 13-4-2024 ರ ಶನಿವಾರದಂದು ರೈತ ಪ್ರತಿರೋಧ ಸಮಾವೇಶವನ್ನು ಪ್ರತಿಭಟನೆ ನಡೆಯುತ್ತಿರುವ ಚನ್ನರಾಯಪಟ್ಟಣದ ನಾಡ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ದೇವನಹಳ್ಳಿಯ ಪತ್ರಕರ್ತರ ಭವನದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ರೈತ ಮುಖಂಡರುಗಳು ತಿಳಿಸಿದ್ದಾರೆ.
ಪ್ರತಿಭಟನೆ ಪ್ರಾರಂಭವಾದಾಗಿನಿಂದ ಈ ಎರಡು ವರ್ಷದಲ್ಲಿ ಸರಕಾರ ಬದಲಾಗಿದೆ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಧರಣಿ ಕುಳಿತ ರೈತರನ್ನು ರೈತರೇ ಅಲ್ಲ ಎಂದು ಹೇಳುವ ಮೂಲಕ ಅಪಮಾನ ಮಾಡಿತ್ತು ಸಾಲದೆಂಬಂತೆ ಹಲವಾರು ಬಾರಿ ಮಾತುಕತೆಗೆ ಕರೆದು ಯಾವುದೇ ರೀತಿಯ ತೀರ್ಮಾನ ನೀಡದೆ ರೈತರನ್ನು ವ್ಯರ್ಥವಾಗಿ ಅಲೆದಾಡುವಂತೆ ಮಾಡಿ ಕಾಲಹರಣ ಮಾಡಿತು ಅಲ್ಲದೇ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ ಸುಧಾಕರ್ ನ್ಯಾಯ ಕೇಳಲು ಹೋಗಿದ್ದ ರೈತರ ಮೇಲೆ ಪೊಲೀಸ್ ಬಲವನ್ನು ಪ್ರಯೋಗಿಸಿ ದೌರ್ಜನ್ಯ ನಡೆಸಿ ಕೇಸುಗಳನ್ನು ಹಾಕಿಸಿದ್ದರು. ಇದೆಲ್ಲವನ್ನು ರೈತ ಸಮುದಾಯ ಮರೆಯಲು ಸಾಧ್ಯವಿಲ್ಲ ಹೀಗೆ ಮುಂದಿನ ಸರಕಾರ ರೈತ ವಿರೋಧಿ ನಿಲುವನ್ನು ವ್ಯಕ್ತಪಡಿಸುತ್ತಿದ್ದಾಗ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಧರಣಿ ಸ್ಥಳಕ್ಕೆ ಬಂದು ರೈತರ ಪರವಾಗಿ ನಿಲ್ಲುವುದಾಗಿ ಹೇಳಿದ್ದರು, ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿಗಳಾಗಿದ್ದರು ಇದುವರೆಗೂ ರೈತರ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಾರದೆ ಈ ಹಿಂದಿನ ಬಿಜೆಪಿ ಸರ್ಕಾರದಂತೆ ಕಾಂಗ್ರೆಸ್ ಸರ್ಕಾರ ಕೂಡ ರೈತರನ್ನು ಕಡೆಗಣಿಸುತ್ತಿದೆ.
ರೈತ ಸಂಘಟನೆಗಳ ಮುಖಂಡರುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ಸರ್ಕಾರ ಸ್ಪಂದಿಸಿಲ್ಲ ಅಲ್ಲದೆ ರೈತರ ಪರವಾಗಿ ಇರುತ್ತೇನೆ ಎಂದಿದ್ದ ಕ್ಷೇತ್ರದ ಶಾಸಕರಾದ ಕೆಎಚ್ ಮುನಿಯಪ್ಪನವರು ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬಂತೆ ವರ್ತಿಸುತ್ತಿದ್ದಾರೆ ಇದು ರೈತ ಸಮುದಾಯದ ಮೇಲೆ ಇವರ ಕಾಳಜಿ ಎಷ್ಟರ ಮಟ್ಟಿನದು ಎಂಬುದನ್ನು ಜಗಜಾಹೀರು ಗೊಳಿಸಿದೆ. ಸರ್ಕಾರದ ಮತ್ತು ಅದಕ್ಕೆ ಸಂಬಂಧಿಸಿದ ಮಂತ್ರಿಗಳು ಹಾಗೂ ಜನಪ್ರತಿನಿಧಿಗಳ ಈ ರೀತಿಯ ವರ್ತನೆಯಿಂದ ಚನ್ನರಾಯಪಟ್ಟಣ ಹೋಬಳಿ ರೈತರ ಮತ್ತಷ್ಟು ನಿರಾಶರಾಗಿದ್ದಾರೆ ರೈತರ ಸಂಕಟವನ್ನು ಬಗೆಹರಿಸಲು ವಿಫಲವಾಗಿರುವ ರಾಜಕೀಯ ಪಕ್ಷಗಳು ಈಗ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ಬರುತ್ತಿವೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ನೀಡುವಂತೆ ಪ್ರಚಾರ ನಡೆಸುತ್ತಿವೆ, ಇಂತಹ ರಾಜಕೀಯ ಪಕ್ಷಗಳು ರೈತರ ಪರವಾಗಿ ಮತ್ತು ಜನಪರವಾದ ಪಕ್ಷ ಎಂದು ಜನರ ಮುಂದೆ ಬಂದು ನಾಟಕಗಳನ್ನು ಮಾಡಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪೈಪೋಟಿಗೆ ಬಿದ್ದಿವೆ ಆದರೆ ಕಳೆದ ಎರಡು ವರ್ಷಗಳಿಂದ ಕಾರ್ಪೊರೇಟ್ ಗಳ ಮೇಲಿನ ಪ್ರೀತಿಯಿಂದ ರೈತರನ್ನು ಬೀದಿಯಲ್ಲಿ ಕೂರಿಸಿರುವ ಈ ಪಕ್ಷಗಳು ರೈತರ ಪರವಾಗಿ ಇದ್ದೇವೆ ಎಂದು ಹೇಳುವ ನೈತಿಕತೆ ಉಳಿಸಿಕೊಂಡಿಲ್ಲ ಮತ್ತು ಈ ಪಕ್ಷಗಳಿಗೆ ರೈತರ ಬಳಿ ಬಂದು ಮತ ಕೇಳುವ ಯೋಗ್ಯತೆ ಇಲ್ಲ ಆದ್ದರಿಂದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ರೈತ ವಿರೋಧಿಗಳಾದ ರಾಜಕೀಯ ಪಕ್ಷಗಳು ನಮ್ಮ ಹಳ್ಳಿಗಳಲ್ಲಿ ಮತಯಾಚನೆ ಮಾಡುವುದನ್ನು ವಿರೋಧಿಸಿ ಮತಯಾಚನೆಗೆ ಬಂದಲ್ಲಿ ಛೀಮಾರಿ ಹಾಕಲು ನಿರ್ಧರಿಸಿದ್ದೇವೆ. ಚುನಾವಣೆ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿರುವ ರೈತ ಸಮುದಾಯ ಮುಂಬರುವ ಚುನಾವಣೆಯಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದು ಘೇರಾವ್ ಮಾಡುವುದು, ರಾಜಧಾನಿ ಕಡೆಗೆ ಪಾದಯಾತ್ರೆ ಮಾಡುವುದು, ಉಪವಾಸ ಸತ್ಯಾಗ್ರಹ ಹೂಡುವ ಬಗ್ಗೆ ನಿರ್ಣಯಿಸಿ ಈ ದೂರ್ತ ವ್ಯವಸ್ಥೆಯ ವಿರುದ್ಧ ಮಾಡು ಇಲ್ಲವೇ ಮಡಿ ಎಂಬ ತೀರ್ಮಾನಕ್ಕೆ ಬರಬೇಕಾಗಿದೆ ಈ ಎಲ್ಲ ವಿಷಯಗಳ ಹಿನ್ನೆಲೆಯಲ್ಲಿ ದಿನಾಂಕ 13-4-2024 ರ ಶನಿವಾರದಂದು ರೈತ ಪ್ರತಿರೋಧ ಸಮಾವೇಶವನ್ನು ನಡೆಸುವ ಮೂಲಕ ಮುಂದಿನ ತೀರ್ಮಾನಗಳನ್ನು ಪ್ರಕಟಿಸಲಾಗುತ್ತದೆ ಸಮಾಜದಲ್ಲಿ ರಾಜ್ಯದ ವಿವಿಧ ಸಂಘಟನೆಗಳ ನಾಯಕರುಗಳು ಬೆಂಬಲಿಗರು ಕೂಡ ಭಾಗವಹಿಸಲಿದ್ದಾರೆ ಆದ್ದರಿಂದ ಚನ್ನರಾಯಪಟ್ಟಣ ಕಚೇರಿ ಮುಂಭಾಗದಲ್ಲಿರುವ ಧರಣಿ ಸ್ಥಳದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಿ ರೈತರನ್ನು ಬೆಂಬಲಿಸಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.