ಕಲಬುರಗಿ ಪೊಲೀಸರಿಂದ ಮಾನವೀಯ ಕ್ರಮ
ಕಲಬುರಗಿ:
ಬೆಂಗಳೂರು ಬಿಸಿಲೇ ಜನರ ಮೈ ಬೆವರಿಸುತ್ತಿದೆ. ಇನ್ನೂ ಕಲಬುರಗಿ ಬಿಸಲಿನ ಝಳ ಎಷ್ಟಿರಬೇಡ? ಹೀಗಾಗಿಯೇ, ಶ್ವಾನಗಳಿಗೂ ಶೂ ಹಾಕಿಸುವ ಕಾಯಕಕ್ಕೆ ಕಲಬುರಗಿ ಪೊಲೀಸರು ಮುಂದಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಇರುವಂತಹ ಶ್ವಾನಗಳಿಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಶೂ ಭಾಗ್ಯ ಒದಗಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಶ್ವಾನದಳದ ಶ್ವಾನಗಳಿಗೆ ಶೂ ಹಾಕಲಾಗಿದೆ. ತಂಡದ ರೀಟಾ, ಜಿಮ್ಮಿ, ರಾಣಿ, ರಿಂಕಿ ಎಂಬ ಶ್ವಾನಗಳಿಗೆ ಶೂ ಕಲ್ಪಿಸಲಾಗಿದೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿನ ಶ್ವಾನಗಳನ್ನು ಬಿಸಿಲಿನಿಂದ ರಕ್ಷಿಸಲು ಶೂ ಹಾಕುವುದರ ಜೊತೆಗೆ ಏರ್‌ಕೂಲರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಜತೆಗೆ ಬಾಯಾರಿಕೆಯಾದಾಗ ಏಳನೀರು, ಸಾಬುದಾನಿ, ರಾಗಿಗಂಜಿ ಸೇರಿ ಇನ್ನಿತರ ತಣ್ಣನೆ ಪದಾರ್ಥಗಳನ್ನು ನೀಡಲಾಗುತ್ತಿದೆ. ಅಪರಾಧ ಕೃತ್ಯಗಳ ಪತ್ತೆಗಾಗಿ ಶ್ವಾನಗಳು ಹೊರಗಡೆ ಹೋದಾಗ ಪಾದಗಳಿಗೆ ಶಾಖ ತಗುಲಬಾರದು ಎಂದು ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.