ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಲಿದ್ದು, ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನು ನಗರದ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ನೀಡಲು ಒತ್ತಡ ಕೇಳಿಬಂದಿದೆ.
ಜಿಬಿಎ ಚುನಾವಣೆಗೆ ಸುಪ್ರೀಂ ಕೋರ್ಟ್ ಆಗಸ್ಟ್ ವರೆಗೆ ಕಾಲಾವಕಾಶ ನೀಡಿದ್ದು ನಗರದಲ್ಲಿ ಉತ್ತಮ ಆಡಳಿತ ನಿರೀಕ್ಷೆಗೆ ರಾಮಲಿಂಗಾ ರೆಡ್ಡಿ ಅವರಂತಹ ಅನುಭವಿಗಳಿಗೆ ಜವಾಬ್ದಾರಿ ನೀಡಬೇಕು ಎಂದು ಹೇಳಲಾಗುತ್ತಿದೆ. ಅವರಿಗೆ ಹೊಣೆಗಾರಿಕೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಲಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆಶಯವಾಗಿದೆ.
ಈ ನಡುವೆ ಸರಕಾರ ರಚನೆಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡಿದಾಗಲೇ ರಾಮಲಿಂಗ ರೆಡ್ಡಿ ಅವರಿಗೆ ಬೆಂಗಳೂರು ಉಸ್ತುವಾರಿ ಕೊಡುವ ಬಗ್ಗೆ ಆಲೋಚನೆ ಮಾಡಲಾಗಿತ್ತು. ಆದರೆ, ಸರಕಾರದ ಮೊದಲ ಗ್ಯಾರೆಂಟಿ ಯೋಜನೆಯಾದ ಶಕ್ತಿ ಜಾರಿಗೆ ರಾಮಲಿಂಗ ರೆಡ್ಡಿ ಅವರ ಅನುಭವ ಬೇಕು ಎಂಬ ಕಾರಣಕ್ಕೆ ಅವರನ್ನು ಸಾರಿಗೆ ಮಂತ್ರಿಯಾಗಿ ನೇಮಿಸಲಾಯಿತು.
ಆರಂಭದಲ್ಲಿ ಸಾರಿಗೆ ಸಚಿವರ ಸ್ಥಾನ ನಿರಾಕರಿಸಿದ್ದ ರಾಮಲಿಂಗ ರೆಡ್ಡಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಸುರೇಶ್, ಅವರ ಮನೆಗೆ ಹೋಗಿ ಮನವೋಲಿಸಿದ್ದರು. ಆಗ ತಮಗೆ ಸಿಎಂ ಸ್ಥಾನ ಸಿಕ್ಕಿದಾಗ ಬೆಂಗಳೂರು ಅಭಿವೃದ್ಧಿ ಸ್ಥಾನ ಬಿಟ್ಟುಕೊಡುವ ಭರಬಸೆಯನ್ನು ಶಿವಕುಮಾರ್ ನೀಡಿದ್ದರು ಎನ್ನಲಾಗಿದೆ. ಇದೀಗ ಅವರು ಸಿಎಂ ಸ್ಥಾನ ಅಲಂಕರಿಸುತ್ತಿದ್ದು, ಕೊಟ್ಟ ಮಾತಿನಂತೆ ರಾಮಲಿಂಗಾ ರೆಡ್ಡಿ ಅವರನ್ನು ಬೆಂಗಳೂರು ಉಸ್ತುವಾರಿ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

