ಮುಂಬೈ: ಬಿಷ್ಣೋಯಿ ಗ್ಯಾಂಗ್ನ ಆದೇಶದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸ್ ಲಾಕಪ್ನಲ್ಲಿದ್ದ ೩೨ ವರ್ಷದ ಅನುಜ್ ಥಾಪನ್ ಎಂಬಾತ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಈತ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಲಾಕಪ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಗೋಕುಲ್ ದಾಸ್ ತೇಜ್ಪಾಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಮೇಲೆ ಏಪ್ರಿಲ್ ೧೪ರಂದು ಗುಂಡಿನ ದಾಳಿ ನಡೆದಿತ್ತು. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅನ್ಮೋಲ್ ಬಿಷ್ಣೋಯ್ ಈ ಪ್ರಕರಣದ ರೂವಾರಿಗಳೆಂದು ಹೇಳಲಾಗಿದೆ. ಈ ಬಗ್ಗೆ ಮುಂಬೈ ಕ್ರೈಂ ಬ್ರ್ಯಾಂಚ್, ಬಿಷ್ಣೋಯ್ ಸಹೋದರರು ಸೇರಿದಂತೆ ಆರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿ, ತನಿಖೆ ಕೈಗೊಂಡಿದೆ.
ತನಿಖೆಯ ಭಾಗವಾಗಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಬಿಷ್ಣೋಯ್ ಗ್ಯಾಂಗ್ನ ಪ್ರಮುಖ ಆರೋಪಿ ವಿಕ್ಕಿ ಗುಪ್ತಾ, ಸಾಗರ್ ಪಾಲ್ ಮತ್ತು ಅನುಜ್ ಥಾಪನ್, ಸೋನುಕುಮಾರ್ ಬಿಷ್ಣೋಯ್ ಬಂಧಿತರಾಗಿದ್ದರು. ವಿಕ್ಕಿ ಗುಪ್ತಾ, ಸಾಗರ್ ಪಾಲ್ ಗುಜರಾತ್ನಲ್ಲಿ ಸೆರೆಸಿಕ್ಕಿದ್ದಾರೆ. ಪಿಸ್ತೂಲ್ ಪೂರೈಕೆದಾರರು ಎನ್ನಲಾದ ಅನುಜ್ ಥಾಪನ್, ಸೋನುಕುಮಾರ್ನನ್ನು ಪಂಜಾಬ್ನಲ್ಲಿ ಬಂಧಿಸಲಾಗಿತ್ತು.
ಈ ಪೈಕಿ ಸೋನುಕುಮಾರ್ನನ್ನು ವೈದ್ಯಕೀಯ ಕಾರಣಗಳಿಂದಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರೆ, ಮೃತಪಟ್ಟಿರುವ ಅನುಜ್ ಸೇರಿ ಮೂವರನ್ನು ಮೇ ೮ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಆದರೆ, ಇಂದು ಲಾಕಪ್ನಲ್ಲೇ ಅನುಜ್ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನು, ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಸಬರಮತಿ ಜೈಲಿನಲ್ಲಿದ್ದರೆ, ಈತನ ಸಹೋದರ ಅನ್ಮೋಲ್ ಬಿಷ್ಣೋಯ್ ಕೆನಡಾದಲ್ಲಿ ನೆಲೆಸಿದ್ದಾನೆ.