ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ, ಪೆನ್‌ಡ್ರೆöÊವ್ ಲೀಕ್ ಪ್ರಕರಣದಲ್ಲಿ ವಿದೇಶ ಸೇರಿಕೊಂಡಿರುವ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೇಳಿದ್ದಾರೆ
ಜರ್ಮನಿಯಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಪರ ವಕೀಲರ ಮೂಲಕ ಸಿಐಡಿಗೆ ಮನವಿ ಮಾಡಿಕೊಂಡಿದ್ದು, ತಾವು ವಿದೇಶದಲ್ಲಿರುವ ಕಾರಣ ಎಸ್‌ಐಟಿ ಆದೇಶದಂತೆ ೨೪ ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ.
ಆದರೆ, ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ಏಳು ದಿನಗಳೊಳಗೆ ವಿಚಾಋಣೆಗೆ ಹಾಜರಾಗಿ ತಮ್ಮ ಬಳಿಯಿರುವ ಎಲ್ಲ ದಾಖಲೆ ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ನಡುವೆ ಟ್ವೀಟ್ ಅನ್ನು ಮಾಡಿರುವ ಪ್ರಜ್ವಲ್ ರೇವಣ್ಣ, ವಕೀಲರು ಸಿಐಡಿ ಪೊಲೀಸರಿಗೆ ಬರೆದಿರುವ ಪತ್ರವನ್ನು ಪೋಸ್ಟ್ ಮಾಡುವ ಜತೆಗೆ, ತಾವು ಏಳು ದಿನಗಳ ಕಾಲಾವಕಾಶ ಕೋರಿದ್ದು, ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಸತ್ಯ ಆದಷ್ಟು ಬೇಗ ಹೊರಬೀಳಲಿದೆ ಎಂದು ಬರೆದುಕೊಂಡಿದ್ದಾರೆ.
ಸರಕಾರ ರಚನೆ ಮಾಡಿರುವ ಬಿ.ಕೆಸಿಂಗ್ ನೇತೃತ್ವದ ಎಸ್‌ಐಟಿ ತಂಡ ಈಗಾಗಲೇ ತನಿಖೆ ಶುರು ಮಾಡಿದ್ದು, ಎರಡು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರಿಗೆ ನೊಟೀಸ್ ನೀಡಿತ್ತು.
ಈ ನೋಟಿಸ್ ಹಿನ್ನೆಲೆಯಲ್ಲಿ ವಕೀಲರ ಮೂಲಕ ಪ್ರಜ್ವಲ್ ಕಾಲಾವಕಾಶ ಕೋರಿದ್ದು, ರೇವಣ್ಣ ಸ್ವದೇಶದಲ್ಲಿಯೇ ಇದ್ದು, ಅವರು ವಿಚಾರಣೆಗೆ ಹಾಜರಾಗ್ತಾರಾ ಅಥವಾ ಅವರು ಕೂಡ ಕಾಲಾವಕಾಶ ಕೋರಿಕೊಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.