ಆನೇಕಲ್: ಆನೇಕಲ್ ತಾಲ್ಲೂಕಿನ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ರೈತರ ನಿಯೋಗದ ಜತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ಭೇಟಿಯಾಗಿ ಪ್ರಸ್ತುತ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ ನಡೆಯುತ್ತಿರುವ ಭೂ ಸ್ವಾಧೀನದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಚರ್ಚೆ ನಡೆಸಿದರು.
ಆನೇಕಲ್ ಶಾಸಕರಾದ ಶಿವಣ್ಣ, ವಿಧಾನಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಆರ್.ಕೆ ರಮೇಶ್, ಇತರೇ ಮುಖಂಡರು, ಸಮಿತಿ ಅಧ್ಯಕ್ಷರು, ಮಾರ್ಗದರ್ಶಕರು, ಕಾರ್ಯದರ್ಶಿಗಳು, ಸಂಚಾಲಕರು, ಹೋರಾಟಗಾರರು, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಆನೇಕಲ್ ತಾಲ್ಲೂಕಿನಲ್ಲಿ ಅನೇಕ ದಶಕಗಳಿಂದ ಕೈಗಾರಿಕೆಗಳಿಗೆ ಮತ್ತು ವಸತಿ ಯೋಜನೆಗಳಿಗೆ ಸಾವಿರಾರು ಎಕರೆ ಭೂಮಿ ಈಗಾಗಲೇ ಸ್ವಾಧೀನಗೊಂಡಿದ್ದು, ಈ ಹಿಂದೆ ಡಿಸೆಂಬರ್ 2024ರಲ್ಲಿ ರೈತರ ನಿಯೋಗ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ರೈತರ ಮನೆಗಳು, ಪಾಲಿಹೌಸ್, ಫಲವತ್ತಾದoತಹ ಕೃಷಿ ಮತ್ತು ತೋಟಗಾರಿಕಾ ಭೂಮಿಗಳನ್ನು ಭೂಸ್ವಾಧೀನದಿಂದ ಕೈ ಬಿಡಬೇಕೆಂದು ಕೈಗಾರಿಕಾ ಮಂತ್ರಿಗಳಿಗೆ ಪತ್ರ ಮುಖೇನ ರಾಮಲಿಂಗಾ ರೆಡ್ಡಿ ಅವರು ಒತ್ತಾಯಿಸಿದ್ದರು.
2006 ರಲ್ಲಿ ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ KIADB ಸಂಸ್ಥೆಯು 1260 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನಪಡಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ರೈತರಿಗೆ ನಾನು ಸಹಕರಿಸಿದ್ದೆ. ರೈತರ ಕಲ್ಯಾಣ ನಮ್ಮ ಸರ್ಕಾರದ ಆದ್ಯತೆಯಾಗಿದ್ದು. ಆನೇಕಲ್ ತಾಲ್ಲೂಕಿನ ರೈತರ ಹಕ್ಕು-ಹಿತಗಳ ಪರವಾಗಿ ನಾನು ಸಹ ಸದಾ ಬೆಂಬಲವಾಗಿ ನಿಂತಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

