ಬೆಂಗಳೂರು: ನೀಟ್ ವಿಚಾರದಲ್ಲಿ ಚರ್ಚೆಗೆ ಸಿದ್ಧವೆಂದು ಕೇಂದ್ರ ಸಚಿವ ನಡ್ಡಾಜೀ ಅವರು ತಿಳಿಸಿದ್ದರೂ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಬೇಳೆ ಬೇಯಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿ ಶಾಸಕರ ಮೇಲೆ ನಿನ್ನೆ ನಡೆದ ಹಲ್ಲೆಯನ್ನು ಖಂಡಿಸಿ ಪಕ್ಷದ ವತಿಯಿಂದ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ, ನಿನ್ನೆ ಶಾಸಕರ ಮೇಲೆ ಹಲ್ಲೆ ನಡೆದಿದೆ. ಶಾಸಕರ ಮೇಲೆ ಹಲ್ಲೆ ಮಾಡಿಸಿದ ನಾಲಾಯಕ್ ಕಾಂಗ್ರೆಸ್ ಸರಕಾರ ಇದು ಎಂದು ಟೀಕಿಸಿದರು.
ನೀಟ್ ವಿಚಾರದಲ್ಲಿ ಯುವಕರನ್ನು ಬೀದಿಗೆ ತರುವುದನ್ನು ಬಿಟ್ಟು ಷಡ್ಯಂತ್ರ ಮಾಡದೇ ಸಂಸತ್ತಿನಲ್ಲಿ ಚರ್ಚೆಗೆ ಬರಬೇಕೆಂದು ಒತ್ತಾಯಿಸಿದರು. ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸುತ್ತಿದೆ; ಇದು ಖಂಡಿತ ಸಾಧ್ಯವಿಲ್ಲ ಎಂದು ನುಡಿದರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುವ ಕಾಂಗ್ರೆಸ್ ಪಕ್ಷವು ಈ ರೀತಿ ಅರಾಜಕತೆ ಸೃಷ್ಟಿಸಿ ಹೇಗಾದರೂ ಆಡಳಿತಕ್ಕೆ ಬರಬೇಕೆಂಬ ಕಪಟ ನಾಟಕವನ್ನು ಮಾಡುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

