ಹೊಸಪೇಟೆ: 10 ಸಾವಿರ ರೂ.ಗೆ ನವಜಾತ ಶಿಶುವೊಂದನ್ನು ಮಾರಾಟ ಮಾಡಿರುವ ಘಟನೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆ ಆಗಸ್ಟ್ 31 ರಂದು ನಡೆದಿತ್ತು. ಈ ವಿಚಾರವಾಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದ ಮಹಿಳೆಯೊಬ್ಬರು ಆಗಸ್ಟ್ 26 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಾದ ಕೇವಲ ಐದು ದಿನಗಳ ನಂತರ, ಶಿಶುವನ್ನು ಹಗರಿಬೊಮ್ಮನಹಳ್ಳಿ ನಿವಾಸಿ ಕರಿಬಸಪ್ಪ ಎಂಬಾತನಿಗೆ ಮಾರಾಟ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಸಹಾಯವಾಣಿಗೆ ಬಂದ ಸುಳಿವಿನ ಮೇರೆಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (ಡಿಸಿಪಿಯು) ಸಂಯೋಜಕರಾದ ಚಿದಾನಂದ್ ಪೊಲೀಸ್ ದೂರು ದಾಖಲಿಸಿದ್ದರು. ಆಸ್ಪತ್ರೆ ಮೂಲಗಳಲ್ಲಿ ಒಬ್ಬರು ಸುಳಿವು ನೀಡಿದ್ದರಿಂದ ಈ ವಿಚಾರ ತಮಗೆ ಗೊತ್ತಾಗಿದೆ ಎಂದು ಚಿದಾನಂದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಈ ಪೈಕಿ ಇಬ್ಬರು ಆಶಾ ಕಾರ್ಯಕರ್ತೆಯರನ್ನು ಕವಿತಾ ಎಂ ಮತ್ತು ನಾಗರತ್ನ ಎಂದು ಗುರುತಿಸಲಾಗಿದೆ. ಇವರಿಬ್ಬರು ಬಾಣಂತಿಯನ್ನು ಮನವೊಲಿಸಿ ಮಗುವನ್ನು ಮಾರಾಟ ಮಾಡಲು ಹಣ ನೀಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ರಕ್ಷಿಸಲಾಗಿದೆ. ಮಗುವನ್ನು ಸರ್ಕಾರ ನಡೆಸುವ ವಿಶೇಷ ದತ್ತು ಕೇಂದ್ರದ ಆರೈಕೆಯಲ್ಲಿ ಇರಿಸಲಾಗಿದೆ.

