ಬೆಂಗಳೂರಿನಲ್ಲಿ ಬಿತ್ತು ಆಲಿಕಲ್ಲು ಮಳೆ!

175
Share It

ಬೆಂಗಳೂರು: ಸತತ ಬೇಸಿಗೆ ಕಾಲದ ವಿಪರೀತ ಸುಡು ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಬೆಂಗಳೂರು ನಗರಕ್ಕೆ ಕಳೆದ 3 ದಿನಗಳಿಂದ ಅದೃಷ್ಟ ಎಂಬಂತೆ ಮಳೆಯಾಗುತ್ತಿದೆ.

ಇಂದು ಸೋಮವಾರ ಬೆಂಗಳೂರು ನಗರದ ಹಲವೆಡೆ ಬಿರುಗಾಳಿ ಸಮೇತ ಮಳೆ ಬಿದ್ದಿದೆ. ಮುಂದಿನ 3 ಗಂಟೆಗಳಲ್ಲಿ ಮಳೆ ಸಾಧ್ಯತೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಇದೀಗ ನಗರದ ಚಾಲುಕ್ಯ ಸರ್ಕಲ್, ಪ್ಯಾಲೇಸ್ ರಸ್ತೆ ಸೇರಿ ಹಲವೆಡೆ ಆಲಿಕಲ್ಲು ಜೊತೆಗೆ ಮಳೆರಾಯ ಆರ್ಭಟಿಸಿದ್ದಾನೆ.

ಬರ ಆವರಿಸಿದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಇಂದು ಮಳೆ ಜೊತೆಗೆ ಗಾಳಿಯ ಪ್ರಮಾಣ ಕೂಡ ಜಾಸ್ತಿ ಇದೆ. ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರಿಗೆ ಕೊನೆಗೂ ಮಳೆರಾಯ ಸತತ 3ನೇ ದಿನವೂ ಸುರಿದು ಜನರಿಗೆ ಒಂದಿಷ್ಟು ತಂಪೆರೆದಿದ್ದಾನೆ.

ಇಂದು ಸೋಮವಾರ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ. ಮಂತ್ರಿಮಾಲ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ನೀರು ಹೋಗಲು ಸ್ಥಳಾವಕಾಶ ಇಲ್ಲದೆ ಸುಮಾರು 2 ಅಡಿಯಷ್ಟು ತುಂಬಿಕೊಂಡಿದೆ. ಸದ್ಯ ಮಂತ್ರಿಮಾಲ್ ಬಳಿ ಟ್ರಾಫಿಕ್ ಜಾಮ್​ ಆಗಿದ್ದು, ವಾಹನ ಸವಾರರಿಗೆ ಸಂಚರಿಸಲು ಸಮಸ್ಯೆ ಉಂಟಾಗಿದೆ.

ಎಲ್ಲೆಲ್ಲಿ ಮಳೆ?: ಚಾಲುಕ್ಯ ಸರ್ಕಲ್, ಪ್ಯಾಲೇಸ್ ರಸ್ತೆ ಸುತ್ತಮುತ್ತ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ರಾಜಾಜಿನಗರ, ಮೆಜೆಸ್ಟಿಕ್, ರೇಸ್ ಕೋರ್ಸ್, ಕಾರ್ಪೋರೇಷನ್, ಮಹಾಲಕ್ಷ್ಮಿಲೇಔಟ್, ಬಸವೇಶ್ವರನಗರ, ಸದಾಶಿವನಗರ, ಬ್ಯಾಟರಾಯನಪುರ ಮತ್ತು ಮತ್ತಿಕೆರೆ, ಪದ್ಮನಾಭನಗರ, ಬನಶಂಕರಿ 2ನೇ ‌ಹಂತ, ಕಾಮಾಕ್ಯ, ಕತ್ರಿಗುಪ್ಪೆ, ಕದಿರೇನಹಳ್ಳಿ, ಚಿಕ್ಕಲುಸಂದ್ರ‌ ಭಾಗದಲ್ಲಿ‌ ಜೋರು ಗಾಳಿ‌ ಸಹಿತ ಮಳೆ ಅಬ್ಬರಿಸಿದ್ದಾನೆ.

20 ಕ್ಕೂ ಹೆಚ್ಚು ಭಾಗದಲ್ಲಿ ಧರೆಗುರುಳಿದ ಮರಗಳು!: ಆಲಿಕಲ್ಲು ಮಳೆ ಹಿನ್ನಲೆ ನಗರದಲ್ಲಿ ಕೆಲ ಅವಾಂತರಗಳು ಕೂಡ ಸಂಭವಿಸಿವೆ. ಅರ್ಧಗಂಟೆ ಬಂದ ಮಳೆಗೆ ನಗರದಲ್ಲಿ 20 ಕ್ಕೂ ಹೆಚ್ಚು ಭಾಗದಲ್ಲಿ ಮರಗಳು ಧರೆಗುರುಳಿವೆ. ಜಯನಗರ, ಬಸವನಗುಡಿ, ಮಲ್ಲೇಶ್ವರ, ಕೋರಮಂಗಲ, ಬಿಟಿಎಂ ಲೇಔಟ್, ಯಶವಂತರಪುರ ಸೇರದಂತೆ ಹಲವೆಡೆ ಮರಗಳು ಧರೆಗೆ ಉರುಳಿದ್ದು ದೂರು ಬಂದ ನಗರಗಳಲ್ಲಿ ಬಿಬಿಎಂಪಿ ಸಿಬ್ಬಂದಿಗಳು ಮರಗಳನ್ನು ತೆರವುಗೊಳಿಸುತ್ತಿರುವುದಾಗಿ ಬಿಬಿಎಂಪಿ ಕಂಟ್ರೋಲ್ ರೂಮ್ ನಿಂದ ಮಾಹಿತಿ ನೀಡಲಾಗಿದೆ.

ಮಳೆಯಿಂದಾಗಿ ಹೊಸೂರು ಬೆಂಗಳೂರು ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್​​ನಲ್ಲಿ ಸಿಲುಕಿ ಆಂಬುಲೆನ್ಸ್ ಪರದಾಡಿದೆ. ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಕಿಲೋಮೀಟರ್ ಕಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಚಂದಾಪುರ ಬೊಮ್ಮಸಂದ್ರ ಹಳೆ ಚಂದಾಪುರ ರಸ್ತೆಯಲ್ಲಿ ಸಾಕಷ್ಟು ವಾಹನಗಳು ನಿಂತಿವೆ.


Share It

You may have missed

You cannot copy content of this page