ಅಂಕಣ ಉಪಯುಕ್ತ ಸುದ್ದಿ

ಕಣ್ಮನ ಸೆಳೆವ ಗುಲ್ ಮೊಹ‌ರ್ ಹೂವು!

Share It

ರಸ್ತೆ ಬದಿ ಬೆಳೆದಿರುವ ಗಿಡಮರಗಳು | ಎಲ್ಲೆಡೆ ಕೆಂಬಣ್ಣ, ಹಳದಿ ಬಣ್ಣದ ಪುಷ್ಪಗಳ ಸೌಂದರ್ಯ

ನಾರಾಯಣಸ್ವಾಮಿ ಸಿ.ಎಸ್

ಹೊಸಕೋಟೆ : ರಸ್ತೆ ಬದಿಯಲ್ಲಿ ಬೆಳೆದಿರುವ ಗುಲ್ ಮೊಹರ್ ಸೇರಿದಂತೆ ಹಲವು ಜಾತಿಯ ಗಿಡಮರಗಳು ಹೂಬಿಟ್ಟಿವೆ. ಅವುಗಳ ಸೌಂದರ್ಯವನ್ನು ಸವಿಯುವುದೇ ಒಂದು ಆನಂದ. ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ವಾಹನ ಸವಾರರ ಕಣ್ಣನ ಸೆಳೆಯುವಲ್ಲಿ ಆ ಹೂವುಗಳು ಯಶಸ್ವಿಯಾಗಿದೆ.

ಏಪ್ರಿಲ್-ಮೇ ತಿಂಗಳು ಬಂತೆಂದರೆ ಸಾಕು. ರಸ್ತೆ ಬದಿಯಲ್ಲಿರುವ ಹಲವು ಜಾತಿಯ ಹೂವುಗಳು ಅರಳಿ ನೋಡುಗರನ್ನು ಸೆಳೆಯುತ್ತಿವೆ. ಇಂತಹ ರಮಣೀಯ ದೃಶ್ಯವನ್ನು ತಾಲೂಕಿನ ಹೊಸಕೋಟೆ ಜಂಗಮಕೋಟೆ ಮುಖ್ಯರಸ್ತೆ, ನಗರೇನಹಳ್ಳಿ -ಬೆಂಡಗಾನಹಳ್ಳಿ ರಸ್ತೆ, ಮುತ್ಸಂದ್ರ-ಹೊಸಕೋಟೆ ಮುಖ್ಯರಸ್ತೆಯಲ್ಲಿ ಕಾಣಬಹುದಾಗಿದೆ.

ಗುಡ್ಡಗಾಡು, ಅರಣ್ಯ ಪ್ರದೇಶ, ರಸ್ತೆ ಬದಿಗಳು ಸೇರಿದಂತೆ ಎತ್ತ ಕಣ್ಣಾಯಿಸಿದರೂ ಎಲ್ಲೆಲ್ಲೂ ಕೆಂಬಣ್ಣ ಹಳದಿ ಬಣ್ಣದ ಪುಷ್ಪಗಳ ಸೌಂದರ್ಯವನ್ನು ಕಣ್ಣುಂಬಿಕೊಳ್ಳಬಹುದು. ರಸ್ತೆ ಬದಿಗಳೂ ಸೇರಿದಂತೆ ಎಲ್ಲೆಲ್ಲೂ ಗುಲ್ ಮೊಹರ್ ಸೇರಿದಂತೆ ಇನ್ನಿತರೆ ಹೂಗಳ ಮರಗಳು ಜನರನ್ನು ಆಕರ್ಷಿಸುತ್ತಿದೆ.

ಗುಲ್ ಮೊಹರ್‌ ಬೆಡಗು, ಚಿತ್ತಾಕರ್ಷಕ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತದೆ. ತನ್ನ ಕೆಂಬಣ್ಣದ ಹೂವನ್ನು ಮುಡಿ ತುಂಬಾ ಹೊತ್ತು ನಿಂತಿರುವ ಗುಲ್ ಮೊಹರ್ ಮರಗಳ ಚೆಲುವೆಲ್ಲ ನನ್ನದೇ ಎನ್ನುತ್ತಾ ನಲಿಯುತ್ತಾ ದಾರಿಯಲ್ಲಿ ಪ್ರಯಾಣಿಸುವವರಮನಸೂರೆಗೊಳ್ಳುತ್ತವೆ. ಮೇ ತಿಂಗಳಲ್ಲಿ ಗುಲ್ ಮೊಹರ್ ಮರಗಳಲ್ಲಿ ಹೂ ಬಿಡುವುದರಿಂದ ಮೇ ಫ್ಲವರ್ ಎಂದೂ ಕರೆಯುತ್ತಾರೆ.

ರಸ್ತೆ ಬದಿಯಲ್ಲಿ ಗುಲ್ ಮೊಹರ್ ಹಾಗೂ ಇನ್ನಿತರೆ ಮರಗಳಲ್ಲಿ ಗುಲ್ ಮೊಹರ್ ಹೂಗಳು ಅರಳಿ ನಿಂತಿವೆ. ಹೊಸಕೋಟೆ ಜಂಗಮಕೋಟೆ ಮಾರ್ಗದ ನೆಗರೇನಹಳ್ಳಿ ಮುಖ್ಯರಸ್ತೆಯ ಹಲವು ಕಡೆ ಸೇರಿದಂತೆ ಗ್ರಾಮೀಣ ಭಾಗದ ಹಲವಾರು ರಸ್ತೆ ಬದಿಗಳಲ್ಲಿ ಗುಲ್ ಮೊಹರ್ ಮರಗಳು ಹೆಚ್ಚಾಗಿದೆ ಗುಲ್ ಮೊಹರ್ ಹೂಗಳು ಹೆಚ್ಚಾಗಿ ಬಿಟ್ಟಿರುವುದು ಜನರನ್ನು ಆಕರ್ಷಿಸುತ್ತಿದೆ.

ಗುಲ್ ಮೊಹ‌ರ್, ಸಮೀಪಿಸುತ್ತಿದ್ದಂತೆಯೇ ಮೊಗ್ಗು ಬಿಡಲು ಶುರು ಮಾಡುತ್ತದೆ. ನಂತರ ಇದರ ಸೌಂದರ್ಯವೇ ಬೇರೆ. ಎಲ್ಲರ ಗಮನವೂ ಗುಲ್ ಮೊಹರ್‌ನ ಹೂ ರಾಶಿಯೆಡೆಗೆ ಹೊರಳುತ್ತದೆ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳುಗಳಲ್ಲಿ ಮದುವೆಗಳು ನಡೆಯುವುದು ಹೆಚ್ಚು ಮದುವೆ ಮನೆಗಳಲ್ಲಿ ಮದುವೆ ಮಂಟಪದ ಸೌಂದರ್ಯ ಹೆಚ್ಚಿಸಲು ಗುಲ್ ಮೊಹರ್ ಹೂಗಳನ್ನು ಹೆಚ್ಚಾಗಿ ಬಳಸುವುದನ್ನು ಕಾಣಬಹುದಾಗಿದೆ .

ಇನ್ನೂ ಗ್ರಾಮೀಣ ಭಾಗಗಳಲ್ಲಿ ಗುಲ್ ಮೊಹ‌ರ್ ಹೂವಿನ ಮೊಗ್ಗಿನಲ್ಲಿರುವ ದಳಗಳನ್ನು ತೆಗೆದು ಅವುಗಳಲ್ಲಿ ಕೋಳಿ ಜಗಳವನ್ನು ಆಡುವ ಮಕ್ಕಳೂ ಇದ್ದಾರೆ. ಒಟ್ಟಿನಲ್ಲಿ ರಾಶಿ ರಾಶಿಯಾಗಿ ಕಂಡುಬರುವ ಗುಲ್ ಮೊಹರ್ ಹೂಗಳು ಪರಿಸರದಲ್ಲಿ ಒಂದು ರೀತಿಯ ಹಬ್ಬದ ವಾತಾವರಣವನ್ನು ಉಂಟುಮಾಡುತ್ತವೆ.

ಸಾಮಾನ್ಯವಾಗಿ ಇದನ್ನು ಅಲಂಕಾರಿಕ ಮರವನ್ನಾಗಿ ಬೆಳೆಸುವುದೇ ಹೆಚ್ಚು. ರಂಗುರಂಗಿನ ಬಣ್ಣಗಳಿಂದ ಕೂಡಿದ ಗುಲ್ ಮೊಹರ್ ಹೂಗಳು ಕಂಗೊಳಿಸುತ್ತ ಮನಸೂರೆಗೊಳ್ಳುತ್ತವೆ.


Share It

You cannot copy content of this page