ರಾಜಕೀಯ ಸುದ್ದಿ

ಪೆನ್ ಡ್ರೈವ್ ರೂವಾರಿ ಕಾಂಗ್ರೆಸ್ “ಮಹಾನಾಯಕ” ದೇವರಾಜುಗೌಡರಿಂದ ದಾಖಲೆ ಬಿಡುಗಡೆ

Share It

ಹಾಸನ: ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ಹೊಳೆನರಸೀಪುರ ಕ್ಷೇತ್ರದ ಬಿಜೆಪಿ ನಾಯಕ ಹಾಗು ವಕೀಲ ದೇವರಾಜೇಗೌಡ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಹಲವು ಮಹತ್ವದ ವಿಚಾರಗಳನ್ನು ಹೊರಹಾಕಿದ್ದಾರೆ.

ಈ ಪೆನ್ ಡ್ರೈವ್ ಕೇಸ್​ನಲ್ಲಿ ಕಾಂಗ್ರೆಸ್ ಪಕ್ಷವೇ ಸೂತ್ರಧಾರಿ ಎಂದು ದೇವರಾಜುಗೌಡ ಆರೋಪಿಸಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಅವರು ನೇರ ಆರೋಪ ಮಾಡಿದ್ದಾರೆ. ಡಿಕೆಶಿ ಮಾತ್ರವಲ್ಲ, ಸಿಎಂ ಸಿದ್ದರಾಮಯ್ಯ ಕೂಡ ಈ ಆಟದಲ್ಲಿ ಇದ್ದಾರೆ.

ಎಲ್.ಆರ್ ಶಿವರಾಮೇಗೌಡ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೊಳೆನರಸೀಪುರದಲ್ಲಿ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸಿದ್ದ ದೇವರಾಜೇಗೌಡರು ತಿಳಿಸಿದ್ದಾರೆ.

ಎಸ್​ಐಟಿ ತನಿಖೆ ಮೂಲಕ ಕೇಸ್​ನಲ್ಲಿ ಯಾರಾರನ್ನು ಫಿಟ್ ಮಾಡಬೇಕು ಎಲ್ಲವನ್ನೂ ಯೋಜಿಸಿದ್ದಾರೆ. ಎಚ್.ಡಿ. ರೇವಣ್ಣ ಅವರನ್ನು ಮುಗಿಸಿದ್ದಾಯಿತು. ಮುಂದೆ ಇವರ ಮುಖ್ಯ ಟಾರ್ಗೆಟ್ ನರೇಂದ್ರ ಮೋದಿ. ಹೇಗಾದರೂ ಮಾಡಿ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಬರುವಂತೆ ಮಾಡುವುದು ಇವರ ತಂತ್ರ. ಬಿಜೆಪಿ ಜೊತೆ ಇರುವ ಎಚ್.ಡಿ. ಕುಮಾರಸ್ವಾಮಿಯೂ ಇವರ ಟಾರ್ಗೆಟ್.

ಅದೇನಾದರೂ ಆಗಲಿ ಆದರೆ, ಎಲ್ಲಾ ಸಾಕ್ಷ್ಯ ಕೊಟ್ಟ ನನ್ನನ್ನೇ ಕೇಸ್​ನಲ್ಲಿ ಎ1 ಆರೋಪಿ ಮಾಡೋಕೆ ನೋಡಿದ್ರು. ವಕೀಲನಾಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ಎಂದು ದೇವರಾಜೇಗೌಡ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಇನ್ನು, ಸಂತ್ರಸ್ತೆಗೆ ಕಾಂಗ್ರೆಸ್ ಪಕ್ಷದವರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಬೇಲೂರಿನ ಅರೇಹಳ್ಳಿಗೆ ಯಾರು ಹೋಗಿದ್ರು? ಎಷ್ಟು ಗಾಡಿ ಹೋಗಿತ್ತು? ಯಾರನ್ನು ಕರಕೊಂಡು ಬಂದ್ರು? ಇವೆಲ್ಲವನ್ನೂ ವಿಚಾರಿಸಿ…

ಹಾಸನದಲ್ಲಿ ಸ್ಕೈ ಬರ್ಡ್ ಹೋಟೆಲ್​ನಲ್ಲಿ ಸಂತ್ರಸ್ತೆ ಮಹಿಳೆ ಜೊತೆ ಶ್ರೇಯಸ್ ಪಟೇಲ್ ಎಷ್ಟು ಹೊತ್ತು ಮಾತನಾಡಿದ್ದಾರೆ ಎಂಬುದೆಲ್ಲಾ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ನೋಡಿ ಎಂದು ಸುದ್ದಿಗೋಷ್ಠಿಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದರು.


Share It

You cannot copy content of this page