ಮೈಸೂರು: ‘ಮಾರ್ಕ್’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಮೈಸೂರಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆಗೂಡಿ ಚಿತ್ರವನ್ನು ವೀಕ್ಷಿಸಿದರು. ಸಂಗಮ್ ಚಿತ್ರಮಂದಿರದಲ್ಲಿ ನಡೆದ ಈ ವಿಶೇಷ ಕ್ಷಣ ಅಭಿಮಾನಿಗಳಿಗೆ ಸ್ಮರಣೀಯ ಅನುಭವವಾಗಿ ಪರಿಣಮಿಸಿತು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಮಯದಲ್ಲೇ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದರು. ತಮ್ಮ ನೆಚ್ಚಿನ ನಟನನ್ನು ಎದುರು ನೋಡುತ್ತಿದ್ದ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಭಾರೀ ಸಂಖ್ಯೆಯಲ್ಲಿ ಸೇರಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.
ಅಭಿಮಾನಿಗಳ ಜೊತೆಯೇ ಸಿನಿಮಾ ವೀಕ್ಷಣೆ: ಸುದೀಪ್ ಅವರು ಸಂಗಮ್ ಚಿತ್ರಮಂದಿರದೊಳಗೆ ಅಭಿಮಾನಿಗಳ ಮಧ್ಯೆ ಕುಳಿತು ‘ಮಾರ್ಕ್’ ಚಿತ್ರವನ್ನು ವೀಕ್ಷಿಸಿದರು. ಈ ವೇಳೆ ಅಭಿಮಾನಿಗಳ ಪ್ರೀತಿ, ಉತ್ಸಾಹ ಕಂಡು ಅವರು ಸಂತಸ ವ್ಯಕ್ತಪಡಿಸಿದರು. ತಮ್ಮ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, ಈ ಕ್ಷಣವನ್ನು ಮರೆಯಲಾಗದ ಅನುಭವವೆಂದು ಹೇಳಿದರು.
ಪೈರಸಿ ವಿರುದ್ಧ ನಿಂತ ಫ್ಯಾನ್ಸ್‌ಗೆ ಮೆಚ್ಚುಗೆ: ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್, “ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ತುಂಬಾ ಸಂತೋಷ ಕೊಡುತ್ತಿದೆ. ಈ ಬಾರಿ ಪೈರಸಿ ವಿರುದ್ಧ ಅಭಿಮಾನಿಗಳೇ ಮುನ್ನಡೆದು ನಿಂತು ಚಿತ್ರವನ್ನು ಕಾಪಾಡಿರುವುದು ನನಗೆ ವಿಶೇಷ ಖುಷಿ ತಂದಿದೆ,” ಎಂದು ಅಭಿಮಾನಿಗಳ ಪ್ರಯತ್ನವನ್ನು ಶ್ಲಾಘಿಸಿದರು.
ಹೊಸ ವರ್ಷದ ಶುಭಾಶಯ: 2025ಕ್ಕೆ ವಿದಾಯ ಹೇಳಿ 2026ಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಕಿಚ್ಚ ಸುದೀಪ್ ಮೈಸೂರಿನ ಜನತೆಗೆ ಹಾಗೂ ತಮ್ಮ ಎಲ್ಲಾ ಅಭಿಮಾನಿಗಳಿಗೆ ಹಾರ್ದಿಕ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. “ಹೊಸ ವರ್ಷ ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಯಶಸ್ಸು ತರಲಿ,” ಎಂದು ಮನಸಾರೆ ಹಾರೈಸಿದರು.

