ರಾಜಕೀಯ ಸುದ್ದಿ

ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಶೇ.70 ಕ್ಕೂ ಹೆಚ್ಚಿನ ಮತದಾನ

Share It

ಬೆಂಗಳೂರು: ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ಬಿರುಸಿನಿಂದ ಆರಂಭಗೊಂಡು ಬಹುತೇಕ ಶಾಂತಿಯುತವಾಗಿ ನಡೆಯಿತು.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿತು. ಹಲವು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂತು. ಸಂಜೆ 5 ಗಂಟೆ ವೇಳೆಗೆ ಸರಾಸರಿ ಶೇ.66.05ರಷ್ಟು ಮತದಾನವಾಗಿ, ಮತದಾನ ಮುಕ್ತಾಯದ ವೇಳೆಗೆ ಶೇ.70ಕ್ಕೂ ಹೆಚ್ಚು ಮತದಾನವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಯುವ ಮತದಾರರು ಈ ಬಾರಿ ಉತ್ಸಾಹದಿಂದ ಮತದಾನ ಮಾಡುತ್ತಿದ್ದದ್ದು ಕಂಡುಬಂದಿತು. ಕೆಲ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಗ್ರಾಮೀಣ ಭಾಗದಲ್ಲಿ ಬಿರುಸಿನ ಮತದಾನವಾಗಿದ್ದು, ನಗರ ಪ್ರದೇಶಗಳಲ್ಲಿ ಅಷ್ಟೊಂದು ಉತ್ಸಾಹ ಕಂಡುಬರಲಿಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಬೇಕಾದವರು ಬೆಳಗ್ಗೆಯೇ ಮತ ಚಲಾಯಿಸಿ ಕೆಲಸ ಕಾರ್ಯಗಳಿಗೆ ತೆರಳಿದರು.

21 ಮಹಿಳೆಯರು ಸೇರಿ ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಇಬ್ಬರು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಸಚಿವರೊಬ್ಬರ ಪತ್ನಿ, ಹಾಲಿ ಸಂಸದರ ಪತ್ನಿ ಹಾಗೂ ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಳಿಯ ಚುನಾವಣಾ ಕಣದಲ್ಲಿ ಇದ್ದಾರೆ.

ಕಲಬುರಗಿಯಲ್ಲಿ ಅತಿ ಕಡಿಮೆ ಶೇ. 63.2 ರಷ್ಟು ಮತದಾನವಾಗಿದ್ದರೆ, ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.77.1 ರಷ್ಟು ಮತದಾನವಾಗಿತ್ತು. ಬೆಳಗಾವಿ ಶೇ.70.5, ಬಾಗಲಕೋಟೆ ಶೇ.71 ಬಿಜಾಪುರ ಶೇ.65.4 ರಾಯಚೂರು ಶೇ.64.2 ಬೀದರ್‌ ಶೇ.65.3, ಕೊಪ್ಪಳ ಶೇ.70.5, ಬಳ್ಳಾರಿ ಶೇ.73.1 ಹಾವೇರಿ ಶೇ.76.3, ಧಾರವಾಡ ಶೇ.72.1, ಉತ್ತರಕನ್ನಡ ಶೇ.74.1, ದಾವಣಗೆರೆ ಶೇ.75.2 ಶಿವಮೊಗ್ಗದಲ್ಲಿ ಶೇ.76.8ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ ಬಿರುಸಿನಿಂದ ಆರಂಭಗೊಂಡ ಮತದಾನವು ಮಧ್ಯಾಹ್ನ ಸ್ವಲ್ಪ ಕಡಿಮೆಯಾದರೂ ಸಂಜೆ 4 ಗಂಟೆ ನಂತರ ಮತ್ತೆ ಮತದಾನ ಬಿರುಸಾಗತೊಡಗಿತು. ಬಿಸಿಲು ಹೆಚ್ಚಾಗಿರುವುದರಿಂದ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.

ಹಿರಿಯರು, ವಿಶೇಷ ಚೇತನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಕೆಲವರನ್ನು ಮತಗಟ್ಟೆಗೆ ಹೊತ್ತು ತಂದು ಮತದಾನ ಮಾಡಿಸಿದ್ದು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು. ಮೊದಲ ಭಾರಿಗೆ ಮತದಾನ ಮಾಡುವ ಯುವ ಸಮುದಾಯದಲ್ಲಿ ಲವಲವಿಕೆ ಕಂಡುಬಂತು. ಮತದಾನ ಮಾಡಿದ ಖುಷಿಯಲ್ಲಿ ಮಾಧ್ಯಮಗಳ ಮುಂದೆ ಸಂತಸ ಹಂಚಿಕೊಂಡರು.

ಒಟ್ಟಾರೆ 3 ತಿಂಗಳಿನಿಂದ ನಡೆದಿದ್ದ ತಂತ್ರ-ಪ್ರತಿ ತಂತ್ರ, ನಾಯಕರ ನಡುವಿನ ಆರೋಪ -ಪ್ರತ್ಯಾರೋಪ, ಅಬ್ಬರದ ಪ್ರಚಾರ ಕೊನೆಯಾಗಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಜೂನ್‌ 4ರವರೆಗೆ ಜನಾದೇಶಕ್ಕೆ ಕಾಯಬೇಕಾಗಿದೆ. ಹೀಗೆ ರಾಜ್ಯದ 28 ಕ್ಷೇತ್ರದ ಮತದಾನ ಅಧಿಕೃತವಾಗಿ ಮುಕ್ತಾಯವಾಗಿದೆ.

ಇಂದು ನಡೆದ 14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇದರಲ್ಲಿ 1,29,48,978 ಪುರುಷರು, 1,29,66,570 ಮಹಿಳೆಯರು, 1945 ತೃತೀಯ ಲಿಂಗಿಗಳಿದ್ದಾರೆ. 6,90,929 ಯುವ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.

14 ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಅನುಕೂಲವಾಗುವಂತೆ ಸೂಕ್ತ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

1.45 ಲಕ್ಷ ಮತಗಟ್ಟೆ ಅಧಿಕಾರಿಗಳು, 35 ಸಾವಿರ ಪೊಲೀಸರು, ಅರೆಸೇನಾ ಪಡೆಯ 65 ಕಂಪನಿಗಳನ್ನು ನಿಯೋಜಿಸಲಾಗಿತ್ತು. ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಎಡಗೈ ತೋರುಬೆರಳಿಗೆ ಶಾಯಿಯನ್ನು ಹಾಕಲಾಗುತ್ತಿತ್ತು. ಏಪ್ರಿಲ್ 26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸರಾಸರಿ ಶೇ. 69.56ರಷ್ಟು ಮತದಾನವಾಗಿತ್ತು.


Share It

You cannot copy content of this page