ರಿಯೋ ಡಿ ಜನೈರೋ: ಬ್ರೆಜಿಲ್ನಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದ ಈಗಾಗಲೇ ೭೫ ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಧ್ಯಕ್ಕಂತೂ ಪ್ರವಾಹ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಭಾರೀ ಮಳೆ ಮತ್ತು ಪ್ರವಾಹಕ್ಕೆ ಬ್ರೆಜಿಲ್ನ ದಕ್ಷಿಣ ಭಾಗ ಅಕ್ಷರಶಃ ತತ್ತರಿಸಿದೆ. ಇಲ್ಲಿನ “ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಈಗಾಗಲೇ ೭೫ ಮಂದಿ ಮೃತಪಟ್ಟಿದ್ದಾರೆ. ೧೦೩ ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆ ಕಾರ್ಯ ಈವರೆಗೆ ಪೂರ್ಣಗೊಂಡಿಲ್ಲ. ಕನಿಷ್ಠ ೧೫೫ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೆಜಿಲ್ನ ಕಣಿವೆ ಪ್ರದೇಶಗಳು ಸೇರಿ ಪರ್ವತ ಇಳಿಜಾರುಗಳು ಮತ್ತು ನಗರ ಪ್ರದೇಶಗಳಲ್ಲಿ ಒಂದು ವಾರದೊಳಗೆ ೩೦೦ ಮಿಲಿಮೀಟರ್ಗಿಂತ ಹೆಚ್ಚು ಮಳೆ ಸುರಿದಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಟಿಯೊರಾಲಜಿ ಹೇಳಿದೆ. ಕಳೆದ ವರ್ಷ ಸಂಭವಿಸಿದ ಪ್ರವಾಹದಲ್ಲಿ ೭೫ ಜನರು ಸಾವನ್ನಪ್ಪಿದ್ದರು.
ನಿರಂತರ ಮಳೆಯಿಂದಾಗಿ ೮೮ ಸಾವಿರಕ್ಕೂ ಹೆಚ್ಚಿನ ಜನರು ನಿರಾಶ್ರಿತರಾಗಿದ್ದು, ೧೬,೦೦೦ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಭೂಕುಸಿತ ಸೇರಿ ಹಲವೆಡೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಕಂಬಗಳು ಧರೆಗುರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸಿವಿಲ್ ಡಿಫೆನ್ಸ್ ಏಜೆನ್ಸಿ ತಿಳಿಸಿದೆ.
ರಕ್ಷಣಾ ಪಡೆಗಳು ಹೆಲಿಕಾಪ್ಟರ್ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ಮಾಡುತ್ತಿವೆ. ಇದುವರೆಗೆ ೧,೧೫,೦೦೦ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಪಡೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.