ಸಿನಿಮಾ ಸುದ್ದಿ

ಜನ್ಮದಿನದಂದು ಫ್ಯಾನ್ಸ್‌ ಭೇಟಿಗೆ ಬ್ರೇಕ್: ‘ಮುಂದೆ ದೊಡ್ಡದಾಗಿ ಸಿಗೋಣ’ ಎಂದ ಯಶ್

Share It

ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ 40ನೇ ಜನ್ಮದಿನವನ್ನು ಜನವರಿ 8ರಂದು ಆಚರಿಸಿಕೊಳ್ಳಲಿದ್ದಾರೆ. ಈಗಾಗಲೇ ಎಲ್ಲೆಡೆ ಹೋಲ್ಡಿಂಗ್ಸ್‌, ಕಟೌಟ್‌ಗಳು ಕಾಣಿಸಿಕೊಂಡು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಆದರೆ ಈ ಬಾರಿ ಕೂಡ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ ಎಂದು ಯಶ್‌ ಸ್ಪಷ್ಟಪಡಿಸಿದ್ದಾರೆ. ಇದರಿಂದ ಫ್ಯಾನ್ಸ್‌ಗೆ ಸ್ವಲ್ಪ ನಿರಾಸೆಯಾಗಿದರೂ, ಭವಿಷ್ಯದಲ್ಲಿ ವಿಶೇಷವಾಗಿ ಸಿಗೋಣ ಎಂಬ ಭರವಸೆ ನೀಡಿದ್ದಾರೆ.

ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿರುವ ಯಶ್‌, ‘ಟಾಕ್ಸಿಕ್‌’ ಚಿತ್ರದ ಮೂಲಕ ಪ್ಯಾನ್‌ ವರ್ಲ್ಡ್‌ ಮಟ್ಟಕ್ಕೆ ತಲುಪುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಚಿತ್ರದ ಶೂಟಿಂಗ್‌ ಹಾಗೂ ಪೂರ್ಣಗೊಳಿಸುವ ಕೆಲಸಗಳಲ್ಲಿ ತೀವ್ರವಾಗಿ ಬ್ಯುಸಿಯಾಗಿರುವುದರಿಂದ ಈ ಬಾರಿಯೂ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ವಿಷಯವನ್ನು ಸ್ವತಃ ಯಶ್‌ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ತಿಳಿಸಿದ್ದು, “ದಯವಿಟ್ಟು ಕ್ಷಮಿಸಿ, ಈ ಬಾರಿ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದೆ ಬೇರೆ ರೀತಿಯಲ್ಲಿ, ಇನ್ನೂ ದೊಡ್ಡದಾಗಿ ಸಿಗೋಣ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಅಭಿಮಾನಿಗಳಿಗೆ ಮನಸಾರೆ ಸಂದೇಶ ಬರೆದಿರುವ ಯಶ್‌, “ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಕಾಯುತ್ತಿರುವುದನ್ನು ನಾನು ಚೆನ್ನಾಗಿ ಅರಿತಿದ್ದೇನೆ. ನಿಮ್ಮೆಲ್ಲರನ್ನು ನೋಡುವ ಆಸೆ ನನಗೂ ಇದೆ. ಈ ವರ್ಷ ನಿಮ್ಮೊಂದಿಗಿರಬೇಕು ಎಂದು ಬಯಸಿದ್ದೆ, ಆದರೆ ಮಾರ್ಚ್‌ 19, 2026ರಂದು ಚಿತ್ರಮಂದಿರಗಳಿಗೆ ಬರಬೇಕಿರುವ ಚಿತ್ರದ ಕೆಲಸದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದೇನೆ. ಈಗ ಸಾಧ್ಯವಾಗದಿದ್ದರೂ, ಈ ಕೊರತೆಯನ್ನು ನಾನು ಖಂಡಿತ ಪೂರೈಸುತ್ತೇನೆ. ನಾವು ಶೀಘ್ರದಲ್ಲೇ ಇನ್ನೂ ವಿಶೇಷವಾಗಿ ಭೇಟಿಯಾಗುತ್ತೇವೆ. ಈ ನಡುವೆ ನಿಮ್ಮ ಶುಭಾಶಯಗಳನ್ನೆಲ್ಲ ನಾನು ಮನಪೂರ್ವಕವಾಗಿ ಸ್ವೀಕರಿಸುತ್ತೇನೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಯಶ್‌ ಜನ್ಮದಿನದ ಸಂಭ್ರಮಕ್ಕೆ ‘ಟಾಕ್ಸಿಕ್‌’ ಚಿತ್ರದ ಟೀಸರ್‌ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಚಿತ್ರತಂಡ ಈಗಾಗಲೇ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಅದರಲ್ಲಿ “Revealing the ONE they warned you about. 10:10 AM – 08-01-2026” ಎಂಬ ಸಂದೇಶದೊಂದಿಗೆ ಜನವರಿ 8ರ ಬೆಳಗ್ಗೆ 10:10ಕ್ಕೆ ಟೀಸರ್‌ ರಿಲೀಸ್‌ ಆಗುವುದಾಗಿ ಸೂಚನೆ ನೀಡಿದೆ. ಇದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.


Share It

You cannot copy content of this page